ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ ಕಟ್ಟಲು. ಹೋರಾಡುತ್ತಿರುವ ಎಚ್ ಕೆ ವಿವೇಕಾನಂದ ರವರು ನಡೆದು ಬಂದ ದಾರಿ.
ಶ್ರಮದಾನ
ಅರಿವಿನಾಳದ ವಿಸ್ತರಣೆ….
52 ವಾರ – 52 ಕೆಲಸ,
16/08/2026,
ಭಾನುವಾರದಿಂದ.
ಬದುಕು ನಿಂತ ನೀರಾಗಬಾರದು. ಅದು ಚಲಿಸುತ್ತಲೇ ಇರಬೇಕು. ಹಾಗೆಯೇ ಬರಹಗಳೂ ಸಹ ಸದಾ ಜೀವಂತ ಇರಬೇಕಾದರೆ ಬದುಕನ್ನು ತೀವ್ರವಾಗಿ ಅನುಭವಿಸುತ್ತಾ ಸಾಗುತ್ತಿರಬೇಕು. ಬದುಕಿದಂತೆ ಬರವಣಿಗೆ ಇರಬೇಕು. ಅಕ್ಷರಗಳಿಗೆ ಅನುಭವದ ರೂಪ ಕೊಡುವುದಕ್ಕಿಂತ ಅನುಭವವನ್ನೇ ಅಕ್ಷರಗಳಿಗೆ ಇಳಿಸಬೇಕು. ಇಲ್ಲದಿದ್ದರೆ ಬರಹಗಳು ಸಹ ಫೇಲವವಾಗುತ್ತದೆ, ನಿರ್ಜೀವವಾಗುತ್ತದೆ, ತನ್ನತನವನ್ನು ಕಳೆದುಕೊಳ್ಳುತ್ತದೆ.

ಸುಮಾರು 2014/15 ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬರವಣಿಗೆ ಪ್ರಾರಂಭಿಸಿದ ನಾನು ಇಲ್ಲಿಯವರೆಗೂ ನಿರಂತರವಾಗಿ ಬರೆಯುತ್ತಲೇ ಅಕ್ಷರಗಳ ಮುಖಾಂತರ ಪ್ರಬುದ್ಧ ಮನಸ್ಸುಗಳ ಮೂಲಕ ಪ್ರಬುದ್ಧ ಸಮಾಜ ನಿರ್ಮಾಣಕ್ಕಾಗಿ ಮನಸ್ಸುಗಳ ಅಂತರಂಗ ಚಳುವಳಿ ನಡೆಸುತ್ತಲೇ ಇದ್ದೇನೆ. ಈ ನಡುವೆ 2020ರ ನವೆಂಬರ್ ಒಂದರಿಂದ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ವನಮಾರ್ಪಳ್ಳಿಯಿಂದ
” ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ,
‘ ಜ್ಞಾನಭಿಕ್ಷ ಪಾದಯಾತ್ರೆ’ ಪ್ರಾರಂಭಿಸಿದೆ “. 385 ದಿನಗಳ ಕಾಲ ಸತತವಾಗಿ ನಡೆದು ರಾಜ್ಯದ 218 ತಾಲ್ಲೂಕುಗಳನ್ನು ಕಾಲ್ನಡಿಗೆಯಲ್ಲಿಯೇ ಸಂಚರಿಸಿ, ಸುಮಾರು 11500 ಕಿಲೋಮೀಟರ್ಗಳನ್ನು ಪೂರೈಸಿದೆ. ಹಣರಹಿತವಾಗಿ ನಡೆದ ಪಾದಯಾತ್ರೆ ಇದು.
ಪಾದಯಾತ್ರೆಯ ನಂತರ ಅದರ ಜೊತೆಗೆ ಆಹಾರ ಸಂರಕ್ಷಣಾ ಜಾಗೃತಿ ಅಭಿಯಾನ ಬೆಂಗಳೂರು – ಕೊಡಗು ಇವರ ಜೊತೆಗೂಡಿ ” ತಿನ್ನುವ ಹಕ್ಕು ನಮಗಿದೆ. ಆದರೆ ಬಿಸಾಡುವ ಹಕ್ಕು ನಮಗಿಲ್ಲ ” ಎಂಬ ಘೋಷಣೆಯ ಅಡಿಯಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಅನೇಕ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ಸರ್ಕಾರದೊಂದಿಗೂ ಸಮನ್ವಯ ಸಾಧಿಸಲು ಪ್ರಯತ್ನಿಸುತ್ತಿದ್ದೇವೆ. ಬೆಂಗಳೂರಿನ ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆ ಗೆಳೆಯರೊಂದಿಗೆ ಒಂದಷ್ಟು ಸಮಾಜಮುಖಿ ಸೇವಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದೇನೆ. ಅನೇಕ ಪರಿಸರ ಸೇನಾ ಸಂಘಟನೆಗಳೊಂದಿಗೆ ಆಗಾಗ ಪರಿಸರ ಜಾಗೃತಿ, ಗಿಡ ನೆಡುವ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದೇನೆ. ಕೋಲಾರದ ಅರಿವು ಭಾರತ ಸಂಸ್ಥೆಯೊಂದಿಗೂ ಕೈಜೋಡಿಸಿ ರಾಜ್ಯದ ಕೆಲವು ಭಾಗಗಳಲ್ಲಿ ನಮ್ಮ ನಡೆ ಅಸ್ಪೃಶ್ಯತೆ ಮುಕ್ತ ಭಾರತದೆಡೆಗೆ ಎಂಬ ಕಾರ್ಯಕ್ರಮದ ಅಂಗವಾಗಿ ಗೃಹಪ್ರವೇಶ, ಸಮತೆಯ ಟೀ, ಸಹಭೋಜನ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಹೋರಾಡುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದೊಂದಿಗೆ ಆಗಾಗ ಸಂವಾದ ನಡೆಸುತ್ತಿರುತ್ತೇನೆ. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಅನೇಕ ಚಟುವಟಿಕೆಗಳಲ್ಲಿ ಅದರ ಭಾಗವಾಗಿದ್ದೇನೆ. ಮೂಡನಂಬಿಕೆ ವಿರೋಧಿ ಒಕ್ಕೂಟ, ಅಖಿಲ ಕರ್ನಾಟಕ ವಿಚಾರವಾದಿ ಟ್ರಸ್ಟ್ ನೊಂದಿಗೆ ಆತ್ಮೀಯ ಸಂಬಂಧ ಹೊಂದಿ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ಅಖಿಲ ಕರ್ನಾಟಕ ವೈಜ್ಞಾನಿಕ ಸಾಹಿತ್ಯ ಪರಿಷತ್ತಿನೊಂದಿಗೆ ನಿಕಟ ಸಂಬಂಧ ಹೊಂದಿದ್ದೇನೆ. ಅನೇಕ ಪ್ರಗತಿಪರ ಮತ್ತು ಸಮಾನ ಮನಸ್ಕರ ವೇದಿಕೆಗಳಲ್ಲಿ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದೇನೆ. ಇದಲ್ಲದೆ ರೈತ, ದಲಿತ, ಕನ್ನಡ, ಸಮತಾವಾದಿ, ಸಮಾಜವಾದಿ, ಯೋಗ, ಆಧ್ಯಾತ್ಮ ಮುಂತಾದ ಅನೇಕ ಸಂಘಟನೆಗಳ ಎಲ್ಲಾ ಸೈದ್ಧಾಂತಿಕ ಹಿನ್ನೆಲೆಯ ವ್ಯಕ್ತಿಗಳೊಂದಿಗೆ ಆಗಾಗ ಚರ್ಚೆ ನಡೆಸುತ್ತಿರುತ್ತೇನೆ.

ಇದು ಕಳೆದ 12 ವರ್ಷಗಳ ನಿರಂತರ ಪಯಣ. ಇದೀಗ ಶ್ರಮಧಾನ ಎನ್ನುವ 52 ವಾರಗಳ, 52 ಉದ್ಯೋಗಗಳ ಒಂದು ಪರಿಕಲ್ಪನೆಯೊಂದಿಗೆ ಕೆಲಸ ಮಾಡುವ ಸಂಕಲ್ಪ ಮಾಡಿದ್ದೇನೆ. ಅಂದರೆ ನಾನು ಮಾಡಬಹುದಾದ ಬಹುತೇಕ ಕೆಳಹಂತದ, ಕೆಳವರ್ಗದ ಕೆಲಸಗಳನ್ನು ವಾರಕ್ಕೆ ಒಂದು ದಿನ ಉಚಿತವಾಗಿ ಮಾಡುವ ಮೂಲಕ ಶ್ರಮದಾನ ಮತ್ತು ಆ ಕೆಲಸದ ಬಗೆಗಿನ ಅರಿವು ಮೂಡಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ.
ಒಂದು ದಿನದಲ್ಲಿ ಕನಿಷ್ಠವೆಂದರೂ ಎಂಟು ಗಂಟೆಗಳ ಕಾಲ ಎಲ್ಲಾ ಕೂಲಿ ಕಾರ್ಮಿಕರಂತೆ ಉಚಿತವಾಗಿ ಕೆಲಸ ಮಾಡುತ್ತೇನೆ. ಒಂದು ವೇಳೆ ಅವರು ಊಟ ತಿಂಡಿ ಕೊಟ್ಟರೆ ಅದನ್ನು ಮಾತ್ರ ಸ್ವೀಕರಿಸುತ್ತೇನೆ. ಸಾಧ್ಯವಾಗದಿದ್ದರೆ ನಾನೇ ಆ ವೆಚ್ಚವನ್ನು ನಿಭಾಯಿಸಿಕೊಳ್ಳುತ್ತೇನೆ. ಯಾವುದೇ ಹಣ ಸ್ವೀಕರಿಸುವುದಿಲ್ಲ.

ಹೋಟೆಲ್ ನಲ್ಲಿ ಸಪ್ಲೇಯರ್ ಆಗಿ, ಒಂದು ಖಾಸಗಿ ಸಂಸ್ಥೆಯಲ್ಲಿ ಸೆಕ್ಯೂರಿಟಿ ಯಾಗಿ, ಒಂದು ಕೃಷಿ ಭೂಮಿಯಲ್ಲಿ ದಿನಗೂಲಿ ಕೃಷಿಕಾರ್ಮಿಕನಾಗಿ, ಒಂದು ಬಟ್ಟೆ ಅಂಗಡಿಯಲ್ಲಿ ಸೇಲ್ಸ್ಮನ್ ಆಗಿ, ಒಂದು ಮದುವೆ ಸಮಾರಂಭದಲ್ಲಿ ಅಡುಗೆ ಊಟ ಬಡಿಸುವ ಸಹಾಯಕನಾಗಿ, ಒಂದು ದಿನ ಯಾವುದಾದರೂ ಸಂಸ್ಥೆಯ ಸ್ವಾಗತಕರನಾಗಿ, ಇನ್ನೊಂದು ದಿನ ಯಾವುದಾದರೂ ಚಲನಚಿತ್ರ ಅಥವಾ ಧಾರವಾಹಿಯ ಸಹಾಯಕ ನಿರ್ದೇಶಕನಾಗಿ, ಯಾವುದಾದರೂ ಕಾರ್ಖಾನೆಯ ಕಾರ್ಮಿಕನಾಗಿ, ಯಾವುದೋ ಶಾಲೆಯಲ್ಲಿ ಶಿಕ್ಷಕನಾಗಿ ಹೀಗೆ ಒಟ್ಟು ಒಂದು ವರ್ಷದ 52 ದಿನ 52 ಬೇರೆ ಬೇರೆ ಕೆಲಸಗಳನ್ನು ಮಾಡಬೇಕೆಂದು ನಿರ್ಧಾರ ಮಾಡಿದ್ದೇನೆ.

ಇದೇ ಆಗಸ್ಟ್ 16 ಭಾನುವಾರದಿಂದ
(16/08/2026) ಪ್ರಾರಂಭವಾಗುವ ಶ್ರಮದಾನ ಮೊದಲಿಗೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ನನ್ನ ಆತ್ಮೀಯ ಮಿತ್ರರಾದ
ಶ್ರೀ ನಾರಾಯಣ್ ಅವರ ಪಾಲಹಳ್ಳಿ ಬಳಿಯ ಅವರ ಕೃಷಿ ಭೂಮಿಯಲ್ಲಿ ಪ್ರಾರಂಭಿಸುತ್ತಿದ್ದೇನೆ. ನಂತರ ಮತ್ತೊಬ್ಬ ಮಿತ್ರರಾದ ಶ್ರೀ ಯುವರಾಜ್ ಅವರ ಗೆಳೆಯರ ಬೆಂಗಳೂರಿನ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಶ್ರಮದಾನ, ಮತ್ತೊಬ್ಬ ಆತ್ಮೀಯರಾದ ಶ್ರೀ ಎಚ್. ದೀಪಕ್ ಅವರ ಎಸ್ ಅಂಡ್ ಎಸ್ ಲೇಬಲ್ಸ್ ಅವರ ಆಫೀಸಿನಲ್ಲಿ ಹೀಗೆ ಪ್ರತಿವಾರ ಇದನ್ನು ಮುಂದುವರಿಸುತ್ತೇನೆ.
ಇದು ನನ್ನ ಅರಿವಿನ ಮಟ್ಟವನ್ನು ಹೆಚ್ಚಿಸಿಕೊಳ್ಳಲು, ಶ್ರಮದಾಯಕ ಕೆಲಸಗಳ ಬೆವರಿನ ಅರ್ಥ ಹುಡುಕಲು, ನನ್ನ ಬರವಣಿಗೆಯ ಜೀವಂತ ಜೀವಕೋಶಗಳನ್ನು ಸಕ್ರಿಯವಾಗಿಡಲು ಮಾಡುತ್ತಿದ್ದೇನೆ. ನಾನು ನನ್ನ ಪಾದಯಾತ್ರೆಯಂತೆ ಇದನ್ನೂ ಸಹ ನನ್ನ ಆತ್ಮಾವಲೋಕನಕ್ಕಾಗಿ, ನನ್ನನ್ನು ನಾನೇ ಆತ್ಮವಿಮರ್ಶೆಗೆ ಒಳಪಡಿಸಿಕೊಂಡು ಸ್ವ ಇಚ್ಛೆಯಿಂದ ನಡೆಸುವ ಶ್ರಮದಾನ.
ಯಾರೇ ಆಗಲಿ ರಾಜ್ಯದ ಯಾವುದೇ ಭಾಗದಲ್ಲಿ ದಯವಿಟ್ಟು ನನ್ನ ಆತ್ಮೀಯ ಮಿತ್ರರು ಯಾವುದಾದರು ಒಂದು ದಿನ ನನ್ನನ್ನು ಆಹ್ವಾನಿಸಿ. ಬಂದು ಕೆಲಸ ಮಾಡುತ್ತೇನೆ. ಯಾವುದೇ ಹಣ ಪಡೆಯುವುದಿಲ್ಲ. ಜೊತೆಗೆ ಸಾಧ್ಯವಾದರೆ ಆ ಊರಿನಲ್ಲಿ ಏನಾದರೂ ಸಂವಾದ ಕಾರ್ಯಕ್ರಮ ಏರ್ಪಡಿಸಿದರೆ ಭಾಗವಹಿಸುತ್ತೇನೆ.
ಒಂದು ವಿನಂತಿ ಏನೆಂದರೆ ತುಂಬಾ ಭಾರ ಹೊರುವ ಕೆಲಸ ನನ್ನಿಂದ ಸಾಧ್ಯವಿಲ್ಲ. ಅದನ್ನು ಹೊರತುಪಡಿಸಿ ಯಾವುದೇ ಕೆಲಸವಾದರೂ ಅಂದರೆ ಕಸಗುಡಿಸುವ, ಬೀದಿ ಸ್ವಚ್ಛ ಮಾಡುವ, ಶೂ ಷಾಲಿಶ್ ಮಾಡುವ, ತಟ್ಟೆ ತೊಳೆಯುವ ಕೆಲಸವಾದರೂ ಸ ಕೆಲಸವಾದರೂ ಖುಷಿಯಿಂದ ಮಾಡುತ್ತೇನೆ. ಎಷ್ಟು ಕೆಳಹಂತದ ಕೆಲಸವೋ ಅಷ್ಟು ಖುಷಿ ಅನುಭವಿಸುತ್ತೇನೆ.
ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುತ್ತೇನೆ. ಕೆಲಸದ ನಂತರ ಆ ಅನುಭವವನ್ನು ಲೇಖನ ರೂಪದಲ್ಲಿ ಬರೆಯುತ್ತೇನೆ.
ಪ್ರೀತಿ ಇರಲಿ, ವಿಶ್ವಾಸವಿರಲಿ, ಮಾನವೀಯ ಮೌಲ್ಯಗಳ ಪುನರುತ್ಥಾನದ ಅಭಿಯಾನಕ್ಕೆ ಜೊತೆಯಾಗಿರಿ. ಧನ್ಯವಾದಗಳು.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
