ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ನಟ ದರ್ಶನ್ರನ್ನು ಕಾಮಾಕ್ಷಿ ಠಾಣಾ ಪೊಲೀಸರು ವಶಕ್ಕೆ ಪಡೆದ ಬೆನ್ನಲ್ಲೇ ದರ್ಶನ್ ಗೆಳತಿ ನಟಿ ಪವಿತ್ರಾ ಗೌಡರನ್ನು ಸಹ ರಾಜ ರಾಜೇಶ್ವರಿ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನಟಿ ಪವಿತ್ರಾ ಗೌಡ ಮತ್ತು ನಟ ದರ್ಶನ್ ನಡುವಿನ ಸಂಬಂಧ ಏನೂ ಎಂಬುದು ಬಹುತೇಕರಿಗೆ ತಿಳಿದಿದೆ. ಇತ್ತಿಚೆಗಷ್ಟೇ ದರ್ಶನ್ ಬರ್ತಡೇ ಸಮಯದಲ್ಲಿ ಪವಿತ್ರಾ ಗೌಡ ದರ್ಶನ್ ಜತೆಗಿನ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದರು. ಇದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರ ಗೌಡ ನಡುವಿನ ಕಿತ್ತಾಟಕ್ಕೆ ಕಾರಣವಾಗಿತ್ತು. ಬಳಿಕ ಈ ಸುದ್ದಿ ತಣ್ಣಗಾಗಿತ್ತು. ಇದಾದ ಕೆಲವೇ ತಿಂಗಳಲ್ಲಿ ರಾಜ್ಯವೇ ಒಂದು ಕ್ಷಣ ಶಾಕ್ ಆಗುವಂತಹ ಸುದ್ದಿ ಹೊರಬಿದ್ದಿದೆ.
ಪವಿತ್ರಾ ಗೌಡ ವಿಚಾರಕ್ಕೆ ನಟ ದರ್ಶನ್ ಬಂಧನವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ. ಕಾಮಾಕ್ಷಿಪಾಳ್ಯ ಶೆಡ್ ಒಂದರಲ್ಲಿ ಜೂನ್ 9ರಂದು ರೇಣುಕಾಸ್ವಾಮಿಯ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ಕೆಲ ಆರೋಪಿಗಳನ್ನು ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿದ್ದರು. ಇದೀಗ ಆರೋಪಿಗಳು ದರ್ಶನ್ ಹೆಸರನ್ನು ಬಹಿರಂಗಪಡಿಸಿದ್ದಾರೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್ ಸೇರಿ 10 ಮಂದಿಯನ್ನು ಬಂಧಿಸಲಾಗಿದೆ.
ನಟಿ ಪವಿತ್ರ ಗೌಡಗೆ ರೇಣುಕಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕೆ ಅಪಹರಿಸಿ ಕಿಡ್ನ್ಯಾಪ್ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ನಿನ್ನೆ ಮೂವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದರು. ಇದೀಗ ಇದೇ ಪ್ರಕರಣದ ನಟ ದರ್ಶನ್ ಸೇರಿದಂತೆ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಇಂದು ಮುಂಜಾನೆ ಮೈಸೂರಿನ ಫಾರ್ಮ್ ಹೌಸ್ನಲ್ಲಿ ದರ್ಶನ್ ಅವರನ್ನು ವಶಕ್ಕೆ ಪಡೆದಿರುವ ಕಾಮಾಕ್ಷಿ ಠಾಣಾ ಪೊಲೀಸರು, ಮೈಸೂರಿನಿಂದ ಬೆಂಗಳೂರಿಗೆ ದರ್ಶನ್ ಅವರನ್ನು ಕರೆತರುತ್ತಿದ್ದಾರೆ. ಕೊಲೆ ಕೇಸ್ನಲ್ಲಿ ಆರೋಪಿಗಳ ಜೊತೆ ದರ್ಶನ್ ನಿರಂತರ ಸಂಪರ್ಕದಲ್ಲಿರುವ ಶಂಕೆಯು ವ್ಯಕ್ತವಾಗಿದೆ.