ರಾಜ್ಯದಲ್ಲಿ ಮುಂದಿನ ಆರು ತಿಂಗಳಲ್ಲಿ ಇನ್ನೊಂದು ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಸಭೆಗೆ ಆಯ್ಕೆಯಾದ ನಾಯಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಕಾರಣ ಆ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ, ಹೆಚ್.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣ ಹಾಗೂ ಕಾಂಗ್ರೆಸ್ ಶಾಸಕ ಇ.ತುಕಾರಾಮ್ ಅವರು ಸಂಡೂರಿನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಮೂವರು ನಾಯಕರುಗಳ ರಾಜೀನಾಮೆ ಪತ್ರವನ್ನು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅಂಗೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೀಘ್ರವೇ ಉಪ ಚುನಾವಣೆ ನಡೆಯುವುದು ಖಚಿತವಾಗಿದೆ.
ಹೆಚ್ ಡಿಕೆ ಮಂಡ್ಯದಿಂದ, ಬೊಮ್ಮಾಯಿ ಹಾವೇರಿ-ಗದಗದಿಂದ ಹಾಗೂ ಇ.ತುಕಾರಾಮ್ ಬಳ್ಳಾರಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿ ಕೋಟಾ ಶ್ರೀನಿವಾಸ ಪೂಜಾರಿ ಅವರೂ ಆಯ್ಕೆಯಾಗಿದ್ದು, ಇವರು ಈವರೆಗೆ ಪ್ರತಿನಿಧಿಸುತ್ತಿದ್ದ ಪರಿಷತ್ ಸದಸ್ಯ ಸ್ಥಾನವೂ ಖಾಲಿಯಾಗಲಿದೆ. ಈ ಹಿನ್ನೆಲೆಯಲ್ಲಿ ತೆರವಾಗುವ ಈ ಸ್ಥಾನಕ್ಕೂ ಚುನಾವಣೆ ನಡೆಯಲಿದೆ. ಖಾಲಿಯಾದ ಸ್ಥಾನಕ್ಕೆ ಮುಂದಿನ ಆರು ತಿಂಗಳೊಳಗೆ ಚುನಾವಣೆ ನಡೆಯಲಿದ್ದು, ಚುನಾವಣಾ ದಿನಾಂಕ ಯಾವಗ ಘೋಷಣೆ ಆಗುತ್ತೆ ಎಂದು ಕಾದು ನೋಡಬೇಕು.