ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಹಲವೆಡೆ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ಹಾಗೂ ಭಾರಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಆಗುಂಬೆ ಘಾಟ್ ನಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.ಜೂನ್ 27ರಿಂದ ಸೆಪ್ಟೆಂಬರ್ 15ರವರೆಗೆ ಆಗುಂಬೆ ಘಾಟ್ ನಲ್ಲಿ ಭಾರಿ ವಾಹನಗಳನ್ನು ನಿಷೇಧಿಸಲಾಗಿದೆ. ನಿರಂತರ ಮಳೆಯಿಂದಾಗಿ ಈ ಭಾಗದಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಸರಕು ಸಾಗಣೆಯ ಬೃಹತ್ ವಾಹನಗಳು ಸಂಚಾರಕ್ಕೆ ಬದಲಿ ಮಾರ್ಗಗಳನ್ನು ಅನುಸರಿಸಬೇಕು. ತೀರ್ಥಹಳ್ಳಿ-ಉಡುಪಿ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಮಾರ್ಗದ ಬದಲಾಗಿ ತೀರ್ಥಹಳ್ಳಿ, ಮಾಸ್ತಿಕಟ್ಟೆ, ಸಿದ್ದಾಪುರ-ಕುಂದಾಪುರ, ಉಡುಪಿ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.