ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಹರಿಯುವ ಕಾವೇರಿ ನದಿ ದಕ್ಷಿಣ ಗಂಗೆಯಾಗಿ ಗಮನಸೆಳೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆದರೆ ಕಾವೇರಿಯನ್ನು ಸಮೃದ್ಧಗೊಳಿಸುವಲ್ಲಿ ಉಪನದಿಗಳ ಪಾತ್ರವಿರುವುದನ್ನು ತಳ್ಳಿಹಾಕುವಂತಿಲ್ಲ. ಇಂತಹ ನದಿಗಳ ಪೈಕಿ ಹೇಮಾವತಿ ನದಿಯೂ ಒಂದಾಗಿದ್ದು, ಮಲೆನಾಡು ಪ್ರದೇಶಗಳಲ್ಲೊಂದಾಗಿರುವ ಚಿಕ್ಕಮಗಳೂರಿನಲ್ಲಿ ಜನ್ಮ ತಾಳಿ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನದಿಯೊಂದಿಗೆ ಲೀನವಾಗುವುದು ಇದರ ವಿಶೇಷತೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯಿಂದ ಹಾಸನಕ್ಕಾಗಿ ಹರಿದು ಬರುವ ಹೇಮಾವತಿ ನದಿ ರೈತರಿಗೆ ಆಸರೆಯಾಗಿ, ಜನರ ದಾಹ ತೀರಿಸುತ್ತಾ ಬರುತ್ತಿದೆ. ಇಂತಹ ಹೇಮಾವತಿ ನದಿಯ ಜನ್ಮದ ಬಗ್ಗೆ ತಿಳಿಯುತ್ತಾ ಹೋದರೆ ಅಚ್ಚರಿ ಮೂಡುತ್ತದೆ. ಅಷ್ಟೇ ಅಲ್ಲದೆ ನದಿ ಹುಟ್ಟಿನ ಪೌರಾಣಿಕ ಕಥೆಯು ಕುತೂಹಲ ಕೆರಳಿಸುತ್ತದೆ. ಹೇಮಾವತಿ ನದಿಯು ಪಶ್ಚಿಮ ಘಟ್ಟದ ಬೆಟ್ಟ ಶ್ರೇಣಿಯಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಮೇಲಬಂಗಾಡಿಯ ಜಾವಳಿಯಲ್ಲಿ ಹುಟ್ಟುತ್ತದೆ.
ಇದನ್ನು ಹಿಂದಿನ ಕಾಲದಲ್ಲಿ ಚಂಡಿಹೊಳೆ, ಎಣ್ಣೆಹೊಳೆ ಎಂದೆಲ್ಲ ಕರೆಯಲಾಗುತ್ತಿತ್ತು. ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಟ್ಟಿ ಹರಿದು ಆ ನಂತರ ಹಾಸನ ಮಂಡ್ಯ ಜಿಲ್ಲೆಗಳ ಮೂಲಕ ದಕ್ಷಿಣಾಭಿಮುಖವಾಗಿ ಹರಿಯುತ್ತದೆ. ಇನ್ನು ಹೇಮಾವತಿ ನದಿ ಹುಟ್ಟು ಹೇಗಾಯಿತು ಎಂಬುದನ್ನು ನೋಡುತ್ತಾ ಹೋದರೆ ಅದರ ಕುರಿತಂತೆ ಪೌರಾಣಿಕ ಕಥೆಯಲ್ಲಿ ಉಲ್ಲೇಖವಿರುವುದನ್ನು ನಾವು ಕಾಣಬಹುದಾಗಿದೆ.ನದಿ ಉಗಮದ ಹಿಂದಿದೆ ಕಥೆ
ಆ ಕಥೆಯ ಪ್ರಕಾರ ಈಗಿನ ಹೇಮಾವತಿ ನದಿ ಹುಟ್ಟುವ ಪ್ರದೇಶವು ದಟ್ಟ ಕಾಡಿನಿಂದ ಆವೃತವಾಗಿತ್ತು. ಆಗ ಗೌತಮ ಮುನಿಗಳು ದಂಡಕಾರಣ್ಯ ಪ್ರದೇಶದಲ್ಲಿ ಸಂಚಾರ ಮಾಡುತ್ತಿದ್ದ ಸಂದರ್ಭ ಜಾಬಾಲಿಯ ಪುತ್ರ ಸತ್ಯಕಾಮನೆಂಬ ಬಾಲಕನು ಗೌತಮರ ಕಾಲಿಗೆ ಬಿದ್ದು ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ವಿದ್ಯೆ ಕಲಿಸುವಂತೆ ಬೇಡಿಕೊಳ್ಳುತ್ತಾನೆ. ಆದರೆ ಆ ಬಾಲಕನ ಪೂರ್ವಾಪರ ತಿಳಿಯದ ಮುನಿಗಳು ನಾನು ಬ್ರಾಹ್ಮಣ ವಟುಗಳಿಗೆ ಮಾತ್ರ ವಿದ್ಯೆ ಕಲಿಸುವ ಸಂಕಲ್ಪ ಮಾಡಿರುವುದರಿಂದ ನೀನು ಯಾರು? ನಿನ್ನ ಕುಲ ಗೋತ್ರವೇನು? ಎಂದು ಪ್ರಶ್ನೆ ಕೇಳುತ್ತಾರೆ . ಗೌತಮರ ಭೇಟಿಯಾದ ಸತ್ಯಕಾಮ
ಇದ್ಯಾವುದು ಅರ್ಥವಾಗದ ಕಾರಣದಿಂದ ಬಾಲಕ ಸತ್ಯಕಾಮ ತಬ್ಬಿಬ್ಬಾಗಿದ್ದನು. ಬಳಿಕ ಸಾವರಿಸಿಕೊಂಡು ನನಗೆ ತಂದೆ ಯಾರೆಂದಾಗಲೀ, ಕುಲಗೋತ್ರದ ಬಗ್ಗೆಯೂ ಗೊತ್ತಿಲ್ಲ ಎಂದು ಹೇಳುತ್ತಾನೆ. ಆಗ ನೀನು ಮನೆಗೆ ಹೋಗಿ ತಾಯಿಯನ್ನು ಕೇಳಿಕೊಂಡು ಬರುವಂತೆ ಮುನಿಗಳು ಹೇಳಿ ಕಳಿಸುತ್ತಾರೆ. ಮನೆಗೆ ಬಂದ ಸತ್ಯಕಾಮ ತನ್ನ ತಾಯಿಗೆ ತಾನು ಗೌತಮ ಮುನಿಗಳನ್ನು ಭೇಟಿಯಾಗಿರುವುದು, ಅವರು ಕೇಳಿದ ಕುಲಗೋತ್ರದ ಪ್ರಶ್ನೆಯನ್ನು ತಾಯಿಗೆ ಹೇಳಿ ನನ್ನ ತಂದೆ ಯಾರು? ನನ್ನ ಕುಲಗೋತ್ರವೇನು ಎಂದು ಕೇಳುತ್ತಾನೆ.ಆಗ ಸತ್ಯಕಾಮನ ತಾಯಿ ಜಾಬಾಲಿಯು, ಮಗನ ಜನ್ಮ ರಹಸ್ಯವನ್ನು ಹೇಳುತ್ತಾಳೆ. ನಾನು ಬ್ರಾಹ್ಮಣರೊಬ್ಬರ ಮನೆಯಲ್ಲಿ ದಾಸಿಯಾಗಿ ಸೇವೆಸಲ್ಲಿಸುತ್ತಿದ್ದೆ. ಅಲ್ಲಿ ನಾನು ಹಲವರಿಗೆ ಅತಿಥ್ಯಖ ನೀಡಿ ತೃಪ್ತಿಪಡಿಸುತ್ತಾ ಬರುತ್ತಿದ್ದೆ. ಈ ವೇಳೆಯಲ್ಲಿ ನಿನ್ನ ಜನ್ಮವಾಯಿತೆಂದು ತಿಳಿಸುತ್ತಾಳೆ. ಇಷ್ಟೇ ಅಲ್ಲದೆ, ಅವರ ಪೈಕಿ ನಿನಗೆ ತಂದೆ ಸ್ಥಾನವನ್ನು ಕರುಣಿಸಿದವರು ಯಾರೆಂದು ಹೇಳುವುದು ಕಷ್ಟವಾಗುತ್ತಿದೆ. ಅವರನ್ನು ನಾನು ಗುರುತಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾಳೆ. ನೀರಿಗಾಗಿ ಸತ್ಯಕಾಮನ ತಪಸ್ಸು
ಜತೆಗೆ ನನ್ನ ಹೆಸರನ್ನೇ ನಿನ್ನ ಹೆಸರಿನೊಂದಿಗೆ ಬಳಸಿ ಜಾಬಾಲಿ ಸತ್ಯಕಾಮನೆಂದು ಗೌತಮ ಮುನಿಗಳಿಗೆ ಹೇಳುವಂತೆ ಹೇಳಿ ಕಳಿಸುತ್ತಾಳೆ. ಅದರಂತೆ ಅಲ್ಲಿಂದ ಮತ್ತೆ ಗೌತಮ ಮುನಿಗಳ ಬಳಿಗೆ ಬಂದ ಸತ್ಯಕಾಮ ತನ್ನ ತಾಯಿ ಜಾಬಾಲಿ ಹೇಳಿದ ವಿಷಯವನ್ನು ಅವರ ಮುಂದೆ ಹೇಳುತ್ತಾನೆ. ಆಗ ತ್ರಿಲೋಕ ಜ್ಞಾನಿಗಳಾದ ಗೌತಮ ಮುನಿಗಳು ಸತ್ಯಕಾಮನ ಜನನದ ಮರ್ಮವನ್ನರಿತು ಅವನ ಸತ್ಯವಾಕ್ಯಕ್ಕೆ ಮೆಚ್ಚಿ ಆತನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಅವನಿಗೆ ಉಪನಯನವನ್ನು ನೆರವೇರಿಸುತ್ತಾರೆ.
ಇದಾದ ಕೆಲವು ವರ್ಷಗಳ ನಂತರ ಆತನಿಗೆ ನಾಲ್ಕು ನೂರು ಗೋವುಗಳನ್ನು ಕೊಟ್ಟು, ಅವುಗಳನ್ನು ಸಾವಿರವಾಗಿ ಪರಿವರ್ತಿಸಿಕೊಂಡು ಬರುವಂತೆ ಕಳಿಸಿಕೊಡುತ್ತಾರೆ. ಗೌತಮ ಮಹರ್ಷಿಗಳ ಮಾತಿನಂತೆ ಸತ್ಯಕಾಮನು ತನಗೆ ನೀಡಿದ ಹಸುಗಳ ಸಹಿತ ಕಾಡಿಗೆ ತೆರಳುತ್ತಾನೆ. ಅಲ್ಲಿ ಅವನಿಗೆ ಪಂಚಭೂತಗಳು ಬ್ರಹ್ಮಜ್ಞಾನದ ಮತ್ತು ಆದಿಶಕ್ತಿಯ ಪರಿಚಯ ಮಾಡಿಕೊಡುತ್ತವೆ. ಅಲ್ಲಿಯೇ ಆಶ್ರಮ ನಿರ್ಮಿಸುತ್ತಾನೆ. ಆದರೆ ಗೋವುಗಳಿಗೆ ನೀರಿನ ಅವಶ್ಯಕತೆ ಇದ್ದ ಕಾರಣ ಸತ್ಯಕಾಮನು ಶಿವನನ್ನು ಕುರಿತು ಇವತ್ತಿನ ಮೇಲಬಂಗಾಡಿಯ ಜಾವಳಿಯಲ್ಲಿ ತಪಸ್ಸು ಮಾಡಲು ಆರಂಭಿಸುತ್ತಾನೆ.ಜಾವಳಿಯ ಗುಡ್ಡದಲ್ಲಿ ಹೇಮಾವತಿ ಉಗಮ
ಈತನ ತಪಸ್ಸಿಗೆ ಮೆಚ್ಚಿದ ಪಾರ್ವತಿ ಹಿಮಾಲಯದ ಹಿಮ ಕರಗಿ ದಂಡಕಾರಣ್ಯದ ಈ ಪ್ರದೇಶದಲ್ಲಿ ನದಿಯಾಗಿ ಪ್ರವಹಿಸುವಂತೆ ವರ ನೀಡುತ್ತಾಳೆ. ಅದರಂತೆ ಸೃಷ್ಟಿಯಾದ ಹೇಮಾವತಿ ದಂಡಕಾರಣ್ಯದಲ್ಲಿ ಗುಪ್ತವಾಗಿ ಹರಿದು ಕೊಟ್ಟಿಗೆಹಾರದಿಂದ ಹೊರನಾಡಿಗೆ ಹೋಗುವ ಮಧ್ಯೆ ಬರುವ ಜಾವಳಿಯ ಸಮೀಪವಿರುವ ದಟ್ಟ ಕಾಡಿನಿಂದ ಆವೃತವಾದ ಗುಡ್ಡದಲ್ಲಿ ಉಗಮವಾಗುತ್ತಾಳೆ.
ಮೊದಲಿಗೆ ಬೆಟ್ಟದ ಮೇಲಿಂದ ಸಣ್ಣ ಝರಿಯಾಗಿ ಹುಟ್ಟಿ ಹರಿದು ಬಳಿಕ ಪಕ್ಕದಲ್ಲಿರುವ ಸಣ್ಣ ಕೊಳದಲ್ಲಿ ಸಂಗ್ರಹಗೊಂಡು, ಅದರ ಪಕ್ಕದ ಮತ್ತೊಂದು ದೊಡ್ಡ ಕೊಳಕ್ಕೆ ಅಂತರಗಂಗೆಯಾಗಿ ಚಲಿಸಿ, ಆ ಕೊಳದಿಂದ ಸ್ವಲ್ಪ ದೂರದಲ್ಲಿರುವ ಇನ್ನೊಂದು ಕೆರೆಗೆ ಗುಪ್ತ ಗಾಮಿನಿಯಾಗಿ ಸೇರಿ ಮುಂದೆ ಅಲ್ಲಿಂದ ಝರಿಯಾಗಿ, ಹೊಳೆಯಾಗಿ, ನದಿಯಾಗಿ ಹರಿಯುತ್ತಾಳೆ. ಹೇಮಾವತಿ ಉಗಮ ಸ್ಥಾ ನವಾದ ಜಾವಳಿಯು ಪವಿತ್ರ ಕ್ಷೇತ್ರವಾಗಿ ಗಮನ ಸೆಳೆಯುತ್ತಿದ್ದು, ಇಲ್ಲಿರುವ ಗಣಪತಿ ದೇಗುಲ ತನ್ನದೇ ಆದ ಮಹಿಮೆಯನ್ನು ಹೊಂದಿದೆ. ಕಾವೇರಿಯೊಂದಿಗೆ ಹೇಮಾವತಿ ಲೀನ
ಚಿಕ್ಕಮಗಳೂರಿನ ಜಾವಳಿಯಲ್ಲಿ ಹುಟ್ಟಿ ಅಲ್ಲಿಂದ ಹಾಸನ ಜಿಲ್ಲೆಗೆ ಹರಿದು ಬರುವ ಹೇಮಾವತಿ ನದಿಗೆ ಗೊರೂರಿನಲ್ಲಿ ಜಲಾಶಯವನ್ನು ಕಟ್ಟಲಾಗಿದ್ದು, ಇದರಿಂದ ಕುಡಿಯಲು ಮತ್ತು ಕೃಷಿಗೆ ನೀರೊದಗಿಸಲಾಗುತ್ತಿದೆ. ನದಿಯು ಸುಮಾರು 245 ಕಿಲೋ ಮೀಟರ್ ಉದ್ದ ಹರಿದು 5410 ಕಿಲೋ ಮೀಟರ್ ನೀರಾವರಿ ಪ್ರದೇಶಕ್ಕೆ ನೀರೊದಗಿಸಿದೆ. ಮಂಡ್ಯದ ಕೃಷ್ಣರಾಜಪೇಟೆ ತಾಲ್ಲೂಕಿನ ಗುಡ್ಡೇಹೊಸಹಳ್ಳಿ ಬಳಿ ಮಂಡ್ಯ ಜಿಲ್ಲೆಯನ್ನು ಪ್ರವೇಶಿಸುತ್ತದೆ.
ಕೆಆರ್ ಎಸ್ ಜಲಾಶಯದ ಹಿನ್ನೀರಿನ ಪ್ರದೇಶವಾದ ಕೃಷ್ಣರಾಜಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ ಬಳಿಯ ಸಂಗಮದಲ್ಲಿ ಕಾವೇರಿ ನದಿಯೊಂದಿಗೆ ಲೀನವಾಗುವ ಹೇಮಾವತಿ ಈ ಸಂಗಮ ಕ್ಷೇತ್ರವನ್ನು ಪವಿತ್ರವಾಗಿಸಿದ್ದಾಳೆ. ಇಲ್ಲಿ ಕಾವೇರಿ, ಲಕ್ಷ್ಮಣ ತೀರ್ಥ ಮತ್ತು ಹೇಮಾವತಿ ಸಂಗಮವಾಗುತ್ತದೆ. ಮುಂದಕ್ಕೆ ಕಾವೇರಿಯಲ್ಲಿ ಲೀನವಾಗಿ ಹರಿಯುತ್ತಾಳೆ.