ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಚುರುಕು ಪಡೆದಿರುವ ಹಿನ್ನೆಲೆ ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಹಲವು ಪ್ರಮುಖ ಜಲಾಶಯಗಳ ನೀರಿನ ಮಟ್ಟವೂ ಕೂಡ ಹೆಚ್ಚಾಗುತ್ತಲಿದೆ.
ಹಾಗಾದರೆ ಇಂದು (ಜೂನ್ 30) ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ತಿಳಿಯಿರಿ.ಕಳೆದ ಬಾರಿ ಅಂದರೆ 2023ರಲ್ಲಿ ಮುಂಗಾರು ಕೈಕೊಟ್ಟ ಹಿನ್ನೆಲೆ ಜಲಾಶಯಗಳು ಬತ್ತುವ ಹಂತವನ್ನು ತಲುಪಿದ್ದವು. ಆದರೆ ಈ ಬಾರಿ 2024ರ ಮೇ ಮಧ್ಯದಲ್ಲೇ ಮಳೆರಾಯನ ಆರ್ಭಟ ಮುಂದುವರೆದಿತ್ತು. ಅಲ್ಲದೆ, ಜೂನ್ ಆರಂಭದಿಂದ ಮುಂಗಾರು ಚುರುಕು ಪಡೆದ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಜಲಮೂಲಗಳಿಗೆ ಜೀವಕಳೆ ಬಂದಂತಾಗಿದೆ.ಇನ್ನು ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರಣ ಮುಂಗಾರು ಮಳೆ ಹೀಗೆ ಮುಂದುವರೆದರೆ,
ಪ್ರಮುಖ ಜಲಾಶಯಗಳ ನೀರಿನ ಮಟ್ಟ ಮತ್ತಷ್ಟು ಹೆಚ್ಚಳ ಆಗಲಿದ್ದು, ಇದರಿಂದ ರೈತರ ಮುಖದಲ್ಲಿ ಮತ್ತಷ್ಟು ಮಂದಹಾಸ ಹೆಚ್ಚಾದಂತಾಗಲಿದೆ. ಹಾಗಾದರೆ ಇಂದು ಬೆಂಗಳೂರು, ಮಂಡ್ಯ, ಮೈಸೂರು ಜಿಲ್ಲೆಗಳ ಜೀವನಾಡಿ ಕೆಆರ್ಎಸ್ (ಕೃಷ್ಣರಾಜ ಸಾಗರ) ಸೇರಿದಂತೆ ಇನ್ನುಳಿದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕೆಆರ್ಎಸ್ ಡ್ಯಾಂ: ಜಲಾಶಯದ ಗರಿಷ್ಠ ಮಟ್ಟವು 124.80 ಅಡಿಯಷ್ಟಿದ್ದು, ನೀರಿನ ಮಟ್ಟವು ಭಾನುವಾರದಂದು 94.40 ಅಡಿಯಷ್ಟು ತಲುಪಿದೆ. ಇನ್ನು 5 ಅಡಿ ನೀರು ಬಂದರೆ ಶತಕ ಮುಟ್ಟಲಿದೆ.
ಜಲಾಶಯ 49.45 ಟಿಎಂಸಿ ನೀರು ಸಂಗ್ರಹ ಸಾಮಾರ್ಥ್ಯವನ್ನು ಹೊಂದಿದ್ದು, ಸದ್ಯ ಜಲಾಶಯದಲ್ಲಿ 18.733 ಟಿಎಂಸಿ ನೀರು ಸಂಗ್ರಹವಾಗಿದೆ. ಮುಂಗಾರು ಆರಂಭ ಆದಾಗಿನಿಂದ ಸುಮಾರು 10 ಟಿಎಂಸಿ ನೀರು ಜಲಾಶಯಕ್ಕೆ ಹರಿದುಬಂದಿದೆ. ಒಳಹರಿವು 12,867 ಕ್ಯುಸೆಕ್ ನೀರು ಹರಿದುಬರುತ್ತಿದ್ದರೆ, ಹೊರಹರಿವು 507 ಕ್ಯೂಸೆಕ್ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಬಿನಿ ಜಲಾಶಯ: ಇಂದು (ಜೂನ್ 30) ಬೆಳಗ್ಗೆ ಕಬಿನಿ ಜಲಾಶಯದಲ್ಲಿ 14.98 ಟಿಎಂಸಿ ನೀರು ಸಂಗ್ರಹವಾಗಿದೆ. ಇದು ಗರಿಷ್ಠ 19.52 ಟಿಸಿಎಂ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಒಳಹರಿವು 9,179 ಕ್ಯೂಸೆಕ್ ಇದ್ದರೆ, ಹೊರಹರಿವು 1,250 ಕ್ಯೂಸೆಕ್ ಆಗಿದೆ.
ಹಾರಂಗಿ ಜಲಾಶಯ: ಇದೀಗ ಇಂದು ಜಲಾಶಯದ ಒಳಹರಿವು 1,216 ಕ್ಯೂಸೆಕ್ ಆಗಿದ್ದರೆ, ಹೊರ ಹರಿವಿನ ಪ್ರಮಾಣ 200 ಕ್ಯೂಸೆಕ್ ಆಗಿದೆ. ಇನ್ನೂ ಈವರೆಗೂ ಜಲಾಶಯದಲ್ಲಿ 3.8 ಟಿಎಂಸಿ ನೀರು ಸಂಗ್ರಹವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ಒಟ್ಟು 8.50 ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ.