ನಮ್ಮೆಲ್ಲರ ಪ್ರೀತಿಯ ಮೇಷ್ಟ್ರು …ಎಂ.ಎಸ್.ಚಂದ್ರಶೇಖರ್.
ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿರುವ, ಸರಳತೆ, ಸೌಜನ್ಮತೆ,ಸೌಮ್ಯತೆಯ ಗುಣಗಳು ಹುಟ್ಟಿನಿಂದಲೇ ಬಂದಂತಹವು. ತನಗೆ ಕಷ್ಟವಾದರೂ ಇತರರಿಗೆ ತೊಂದರೆ
ಕೊಡಲೊಲ್ಲದ ಇವರು “ಪರಹಿತಕ್ಕಿಂತ ಬೇರೆ ಧರ್ಮವಿಲ್ಲ’ ಎಂಬಂತೆ ಪರಹಿತವೇ ತಮ್ಮ ಹಿತವೆಂದು
ಭಾವಿಸಿಕೊಂಡು ಬಂದವರು. “ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದೆಂಬಂತೆ” ಯಾರಿಗೂ
ಗೊತ್ತಾಗದ ರೀತಿಯಲ್ಲಿ ಎಲೆಯ ಮರೆಯ ಕಾಯಿಯಂತೆ ತಮ್ಮ ಕೈಲಾದಷ್ಟು ದಾನ ಕೈಂಕರ್ಯಗಳನ್ನು
ನಡೆಸಿಕೊಂಡು ಬರುತ್ತಿದ್ದಾರೆ. ಪ್ರಚಾರ ಬಯಸದ ಇವರು ಪರದೆಯ ಹಿಂದೆ ಕಾರ್ಯ ಮಾಡುವವರು.ಎಲ್ಲರನ್ನೂ ತಮ್ಮ ಮೃದು ಮಾತುಗಳಿಂದ ಆಕರ್ಷಿಸುತ್ತಾ, ಹಲವು ಕೆಲಸ ಕಾರ್ಯಗಳಲ್ಲಿ ತಮ್ಮನ್ನೇ ತೊಡಗಿಸಿಕೊಂಡಿದ್ದಾರೆ.
“ಬೆಣ್ಣೆಯಲ್ಲಿ ಕೂದಲು ತೆಗೆದ ಹಾಗೆ ಜನರಿಂದ ಕೆಲಸ ತೆಗೆದುಕೊಳ್ಳುವ ಇವರು ಪ್ರತಿಯೊಂದು
ಸಮಾರಂಭದಲ್ಲೂ ಕಾಣಸಿಗುವರು.ಇವರ ಸಮಾಜ ಸೇವಾಕಾರ್ಯ ಇಂದಿನ ಯುವ ಪೀಳಿಗೆಗೆ ಆದರ್ಶವಾಗಿರುವ ಇವರು ನಿಜಕ್ಕೂ ಶ್ರೇಷ್ಠರು. ಇವರೇ ನಮ್ಮ ಪ್ರೀತಿಯ ಮೇಷ್ಟ್ರು ಎಂ.ಎಸ್. ಚಂದ್ರಶೇಖರ್.
ಬಿಎಸ್ಸಿ ಬಿಎಡ್ ಪದವಿ ಪಡೆದು, ತಾಲೂಕಿನ ಚಿನ್ನಹಳ್ಳಿ ಶಾಲೆಯಲ್ಲಿ ಹಾಗು ಶ್ರವಣಬೆಳಗೊಳದ ಜೈನ ವಿದ್ಯಾ ಸಂಸ್ಥೆಯಲ್ಲಿ ಕೆಲವು ವರ್ಷಗಳ ಕಾಲ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ, ಶಿಕ್ಷಕ ವೃತ್ತಿಯನ್ನು ಕೈ ಬಿಟ್ಟು ಕೃಷಿ ಬದುಕಿನಲ್ಲಿ ಅಪರೂಪದ ಕಾಯಕಯೋಗಿಯಾಗಿ.. ಸರ್ವರಿಗೂ ನಂಬಿಕೆಯ ಬಲವಾಗಿ ನಮ್ಮ ನಿಮ್ಮ ನಡುವೆ ಇದ್ದಾರೆ. ಸದಾ ಸರ್ವರ ಒಳ್ಳೆ ಕೆಲಸಗಳಿಗೆ ಪ್ರೋತ್ಸಾಹಿಸಿ ಬೆನ್ನು ತಟ್ಟಿ ಎಲೆಮರೆಕಾಯಿಯಂತೆ ಶ್ರಮಿಸುತ್ತಾರೆ.ಯಾವುದೇ ಕೆಲಸಗಳನ್ನು ಕೈಗೆತ್ತಿಕೊಂಡರೆ ಶಿಸ್ತಿನಿಂದ ಮುಗಿಸುವವರೆಗೂ ಬೆಂಬಿಡದೆ ಕಾಡುತ್ತಾರೆ. ಸಮಯ ಪಾಲನೆ ಸಮಾಜದ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಪ್ರೋತ್ಸಾಹಿಸುವುದು ಇವರ ವಿಶೇಷ ಗುಣ.
ಎಂ ಎಸ್ ಚಂದ್ರಶೇಖರೊಂದಿಗೆ ಯಾವುದಾದರೂ ಕಾರ್ಯಕ್ರಮಕ್ಕೆ ದೇಣಿಗೆ ಸಂಗ್ರಹಿಸಲು ಹೊರಟರೆ. ಇವರನ್ನು ನೋಡಿದ ತಕ್ಷಣ ದೇಣಿಗೆ ಸಮರ್ಪಕವಾಗಿ ಬಳಕೆಯಾಗುತ್ತದೆ ಎಂಬ ನಂಬಿಕೆಯಿಂದ ಹೆಚ್ಚು ಹೆಚ್ಚು ದೇಣಿಗೆಯನ್ನು ಸರ್ವರೂ ನೀಡುತ್ತಾರೆ. 2012ನೇ ಇಸ್ವಿಯಲ್ಲಿ ಹಿರಿಯ ವಿದ್ಯಾರ್ಥಿಗಳೆಲ್ಲ ಸೇರಿ ಹೃದಯೋನ್ ಮಿಲನ ಕಾರ್ಯಕ್ರಮ ನಡೆಸಲು ದೇಣಿಗೆ ಸಂಗ್ರಹಿಸಲು ನಮ್ಮೊಟ್ಟಿಗೆ ಬಂದು ರಸ್ತೆಯಲ್ಲಿ ನಿಂತು ಎರಡು ಗಂಟೆ ಸಮಯದಲ್ಲಿ 70,000ಗಳನ್ನ ಸಂಗ್ರಹಿಸಿ ಕೊಟ್ಟಿದ್ದರು.
ಸೌಜನ್ಯದಿಂದ ಇವರು ದೂರವಾಣಿ ಕರೆ ಮಾಡಿ ಈ ಕಾರ್ಯಕ್ರಮಕ್ಕೆ ನಿಮ್ಮಿಂದ ದೇಣಿಗೆ ಬಯಸುತ್ತೇವೆ ಎಂದು ಕೇಳಿದರೆ ಯಾರು ಕೂಡ ಇಲ್ಲ ಎನ್ನುವುದಿಲ್ಲ ಅಷ್ಟು ಪ್ರಾಮಾಣಿಕತೆಯನ್ನು ಉಳಿಸಿಕೊಂಡಿದ್ದಾರೆ. 2022ರ ಶ್ರೀ ಬಸವ ಜಯಂತಿ, ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಜಯಂತಿ ಕಾರ್ಯಕ್ರಮಕ್ಕೆ ಸಾವಿರಾರು ರೂ ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದಾರೆ. ಬಾಳ್ಳುಪೇಟೆ ಪ್ಲಾಂಟರ್ಸ್ ಕ್ಲಬ್ಬಿನ ಎಲ್ಲ ಚಟುವಟಿಕೆಗಳನ್ನು ಅಧ್ಯಕ್ಷರಾಗಿ ಸಂಸ್ಥೆಯ ಕಾರ್ಯ ಚಟುವಟಿಕೆಗಳು ಸಮಾಜಕ್ಕೆ ಪ್ರೇರಣೆಯಾಗುವ ಕಾರ್ಯಗಳನ್ನು ಕೂಡ ಮಾಡಿದ್ದಾರೆ.
ಇವರ ಅಚ್ಚುಕಟ್ಟಾದ ಸೇವೆಗೆ ಸಂದ ಗೌರವವಾಗಿ ಹಾಸನ ಜಿಲ್ಲಾ ಬೆಳಗಾರರ ಸಂಘದ ಖಜಾಂಚಿಯಾಗಿ ಆಯ್ಕೆಯಾಗಿ ನಿಷ್ಠೆಯಿಂದ ಯಾವುದೇ ಪ್ರಚಾರದ ಗೊಡವಿಗೆ ಹೋಗದೆ ಸಂಘದೊಟ್ಟಿಗೆ ನಿರಂತರ ಹೆಜ್ಜೆ ಹಾಕಿ ಕೆಲಸ ನಿರ್ವಹಿಸಿ ಚಾಪು ಮೂಡಿಸಿದ್ದರು, ಆದರೆ ಕಾರ್ಯದರ್ಶಿಯಾಗಿ ಆಯ್ಕೆ ಮಾಡುವಲ್ಲಿ ಬೆಳೆಗಾರ ಸಮುದಾಯ ಎಡವಿದ್ದು ವಿಪರ್ಯಾಸ.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾಕ್ಕೆ 60ಕ್ಕೂ ಹೆಚ್ಚು 2500 ಬೆಲೆಯ ಸದಸ್ಯರನ್ನು ಮಾಡಿಸಿ ಸಮಾಜ ಸಂಘಟನೆಯನ್ನು ನಿರೂಪಿಸಿದ್ದಾರೆ.
ಕಾಡಾನೆ ಮಾನವ ಸಂಘರ್ಷದ ಧರಣಿಯಲ್ಲಿ ನಾನು ಕಾರಾಗೃಹಕ್ಕೆ ತಳ್ಳಲ್ಪಟ್ಟಾಗ ನಿರಂತರ ಐದು ದಿನಗಳ ಕಾಲ ಹೋರಾಟ ನಡೆಸಿ ನನ್ನನ್ನು ಕಾರಾಗೃಹದಲ್ಲಿ ಹೊರ ತರುವಲ್ಲಿ ಇವರ ಶ್ರಮ ಅಪಾರ.
ನಮ್ಮಗಳ ಒಳ್ಳೆ ಕಾರ್ಯಗಳಿಗೆ ಬೆನ್ನ ಹಿಂದೆ ನಿಂತು ದೊಡ್ಡ ಶಕ್ತಿಯಾಗಿ ನಮಗೆ ಸ್ಪೂರ್ತಿ ಮತ್ತೆ ಧೈರ್ಯ ಮತ್ತೆ ಆದರ್ಶವಾಗಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದಾರೆ. ಹಾಗೂ ಜಮ್ಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೂ ಕೂಡ ಸ್ಪರ್ಧೆ ಮಾಡಿದ್ದಾರೆ, ಎರಡು ಸಂಸ್ಥೆಯಲ್ಲಿ ಅಯ್ಕೆಯಾಗಿ ಉನ್ನತ ಸೇವೆ ಒದಗಿಸುವಂಥಾಗಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ.
ನಮ್ಮ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಗೌರವ ಆದರ ಅಭಿಮಾನ ಸತ್ಕಾರಗಳಿಗೆ ಸದಾ ಪಾತ್ರರಾಗಿರುವ ಎಂ.ಎಸ್. ಚಂದ್ರಶೇಖರ್ ಅವರು ನಮ್ಮಂತವರಿಗೆ ಹೊಸ ಚೈತನ್ಯ. ಚಂದ್ರಶೇಖರ್ ರವರು ಬದುಕಿನಲ್ಲಿ ಸಹಸ್ರಚಂದ್ರ ದರ್ಶನವನ್ನು ಪಡೆದು ತಮ್ಮ ಅಮೂಲ್ಯ ಸಲಹಾ ಸೇವೆಗಳ ಮೂಲಕ ಯುವ ಪೀಳಿಗೆಗೆ ದಾರಿ ದೀಪವಾಗಲಿ ಎಂದು ನಾನು ಭಗವಂತನಲ್ಲಿ ಬೇಡುತ್ತೇನೆ.
ಯಡೇಹಳ್ಳಿ”ಆರ್”ಮಂಜುನಾಥ್.