ಸಾರ್ವಜನಿಕ ಸೇವಕ’ ಎಂಬ ಪದವೇ ಇತ್ತೀಚಿನ ದಿನಗಳಲ್ಲಿ ಬಹಿರಂಗವಾಗಿ ಲಂಚ ಕೇಳಲು ಅಥವಾ ನಿರ್ಭಯವಾಗಿ ಅಕ್ರಮ ಆಸ್ತಿ ಸಂಪಾದಿಸಲು ಪರವಾನಗಿ ನೀಡಿದಂತಾಗಿದೆ.
ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಅವರು, ಬೆಸ್ಕಾಂ ಮಾಜಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್(ಎಇಇ)ಗೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1 ಕೋಟಿ ರೂ. ದಂಡ ವಿಧಿಸಿದ್ದಾರೆ.
2011ರಲ್ಲಿ ಪ್ರಕರಣ ದಾಖಲಿಸಿದಾಗ ಬೆಸ್ಕಾಂನಿಂದ ಲೋಕೋಪಯೋಗಿ ಇಲಾಖೆಗೆ ನಿಯೋಜಿಸಲಾಗಿದ್ದ ಸಿ ರಾಮಲಿಂಗಯ್ಯ ಅವರ ವಿರುದ್ದದ ಅಕ್ರಮ ಆಸ್ತಿ ಗಳಿಕೆ(ಡಿಎ) ಆರೋಪ ಸಾಬೀತಾಗಿದ್ದು, ಅವರಿಗೆ ಮೂರು ವರ್ಷ ಕಠಿಣ ಜೈಲು ಶಿಕ್ಷಣ ಹಾಗೂ 1 ಕೋಟಿ ರೂಪಾಯಿ ದಂಡ ವಿಧಿಸಿ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಅವರು ಜೂನ್ 29ರಂದು ತೀರ್ಪು ನೀಡಿದ್ದಾರೆ.
ಆದಾಯ ಮೀರಿ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ 2011ರ ಸೆಪ್ಟೆಂಬರ್ 30ರಂದು ಲೋಕಾಯುಕ್ತ ಪೊಲೀಸರು, ರಾಮಲಿಂಗಯ್ಯ ಅವರ ಮನೆ, ಕಚೇರಿ ಸಂಬಂಧಿಕರ ನಿವಾಸಗಳ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಒಂದು ಕೆಜಿಗೂ ಅಧಿಕ ಚಿನ್ನಾಭರಣ, ಬೆಳ್ಳಿ, ಕೋಟ್ಯಾಂತರ ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ ಚರಾಸ್ತಿ ಪತ್ತೆಯಾಗಿದ್ದು, ದಾಖಲೆ ಜಪ್ತಿ ಮಾಡಿದ್ದರು.
1984 ರಿಂದ 2011 ರವರೆಗಿನ ತಪಾಸಣೆ ಅವಧಿಯಲ್ಲಿ ರಾಮಲಿಂಗಯ್ಯನವರ ಒಟ್ಟು ಆಸ್ತಿ ಮತ್ತು ಖರ್ಚು 3.28 ಕೋಟಿ ರೂ.ಗಳಾಗಿದ್ದು, ಅವರ ಆದಾಯ 2.32 ಕೋಟಿ ರೂ. ಆಗಿದ್ದು, ಉಳಿದ ರೂ 96.09 ಲಕ್ಷ(41.41%) ಅಕ್ರಮ ಆಸ್ತಿ ಎಂದು ಪರಿಗಣಿಸಲಾಗಿದೆ.
“ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸೇವಕ ಎಂಬ ಪದವೇ ಇಂತಹ ವ್ಯಕ್ತಿಗಳಿಗೆ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವ ವಿಷಯದಲ್ಲಿ ಧೈರ್ಯದಿಂದ ಮತ್ತು ಬಹಿರಂಗವಾಗಿ ಲಂಚ ಕೇಳಲು ಅಥವಾ ಅಕ್ರಮವಾಗಿ ಆಸ್ತಿ ಗಳಿಸಲು ಪರವಾನಗಿಯಾಗಿದೆ.
ಅದರಲ್ಲೂ ಸಮಾಜದ ಬೆನ್ನೆಲುಬಾಗಿರುವ ಬಡವರು, ದನಿಯಿಲ್ಲದವರು, ಅಸಹಾಯಕರು ಮತ್ತು ದೀನದಲಿತರು ಭ್ರಷ್ಟ ಸಾರ್ವಜನಿಕ ಸೇವಕರ ಕೈಯಲ್ಲಿ ನಿಜವಾದ ಬಲಿಪಶುಗಳಾಗುತ್ತಿದ್ದಾರೆ. ನಮ್ಮಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಭ್ರಷ್ಟಾಚಾರ ದೊಡ್ಡ ಸವಾಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಈ ಪರಿಸ್ಥಿತಿಯಿಂದಾಗಿ ಜನರು ಸರ್ಕಾರದ ಆಡಳಿತ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.