
ಅಪರ್ಣರವರ ಹೃದಯಸ್ಪರ್ಶಿಯಾದ ನಿರೂಪಣ ಶೈಲಿ, ಭಾಷೆಯ ಚೆಂದ ನನ್ನನ್ನು ನಿರೂಪಕನಾಗಿ ಮಾಡಿದ್ದು.
ನಾನು ಶಾಲಾ ದಿನಗಳಿಂದ ಅಪರ್ಣ ರವರ ಆಕಾಶವಾಣಿ ಚಂದನದಲ್ಲಿನ ನಿರೂಪಣೆ ಮಾತುಗಾರಿಕೆ ಕೇಳುತ್ತಾ ಬೆಳೆದವನು. ಅವರು ಬಳಸುತ್ತಿದ್ದ ಭಾಷೆಯ ಹಿಡಿತ ಮಿಡಿತಕ್ಕೆ ಮನಸೂರೆಗೊಂಡವನು.
ನಿರೂಪ ಎನ್ನುವುದು ಚರಿತ್ರೆ ಕಾಲದಲ್ಲಿ ರಾಜರಿಂದ ಕೆಳ ಅಂತಸ್ಸಿನವರೆಗೆ ಕಳುಹಿಸುವ ಪತ್ರ ರುತ್ತಾಂತವಾಗಿತ್ತು. ಈ ನಿರೂಪವು ಇಂದು ಆಧುನಿಕ ಜಗತ್ತಿನಲ್ಲಿ ನಿರೂಪಣೆಯಾಗಿ ಭಿನ್ನವಾದ ಅರ್ಥವನ್ನು ನೀಡುತ್ತದೆ.
ಯಾವುದೇ ಒಂದು ಸಮಾರಂಭ ಕಾರ್ಯಕ್ರಮಗಳಲ್ಲಿ ಅಧ್ಯಕ್ಷ ಅತಿಥಿ ಗಣ್ಯರುಗಳಿಗೆ ಮಾತುಗಳ ಕೊಂಡಿಯಾಗಿ ಜೀವ ತುಂಬಿ ಇಡೀ ಸಮಾರಂಭವನ್ನೇ ಚೈತನ್ಯಶೀಲಗೊಳಿಸುವಂಥ ಕಲೆ ಎಂದರೆ ನಿರೂಪಣಾ ಕಲೆ.
ಸಾವಿರದ ಒಂಬೈನೂರ ತೊಂಬತ್ತರ ನಂತರ ಅಪರ್ಣ ರವರ ಆಕಾಶವಾಣಿ ದೂರದರ್ಶನಗಳಲ್ಲಿ ಭಾವಶೈಲಿಯಲ್ಲಿ ಬಿತ್ತರಗೊಂಡು ಆ ಭಾಷೆ ಶೈಲಿಯ, ಧ್ವನಿಯ ಹದದ ಬಗ್ಗೆ ಶೋತ್ರುಗಳಾಗಿದ್ದ ನಾನು ಕೇಳುತ್ತಾ ಆಕರ್ಷಣಗೊಳ್ಳುತ್ತ ಬೆಳೆದು ಈ ಕಲೆಯ ಆಕರ್ಷಣೆಯಿಂದ ಸಭೆ ಸಮಾರಂಭಗಳಲ್ಲಿ ನಿರೂಪಕರಾಗಿ ಹಂತ ಹಂತವಾಗಿ ಬೆಳೆದೆ ಆದ್ದರಿಂದ ಇಂದು ನಿರ್ಗಳವಾದ ಭಾಷೆಯ ಹಿಡಿತ ನನ್ನಲ್ಲಿ ಮೂಡಲು ಕಾರಣವಾಯಿತು.
ಈ ನಿರೂಪಣೆಯ ಕಲೆಯ ಹೆಸರಿನಲ್ಲಿ ಕೆಲವರು ಅತಿಥಿ ಅಭ್ಯಾಗತರ ಅನಿಸಿಕೆ ಮಾತು ಆಶ್ವಾಸನೆ ಸಿದ್ಧಾಂತಗಳನ್ನೆಲ್ಲ ನುಂಗಿ ಹಾಕಿ ಅದನ್ನೆಲ್ಲ ನಿರೂಪಕನೆ ಕಬಳಿಸಿ ಕೇಳುಗರಿಗೆ ಕಿರಿಕಿರಿಯನ್ನುಂಟು ಮಾಡುವ ಅತಿ ಭಯಂಕರ ನಿರೂಪಕ ಶಿಖಾಮಣಿಗಳು ಹಲವರು ನಮ್ಮ ಎದುರಿಗೆ ಇದ್ದಾರೆ. ಆದರೆ ಇದಕ್ಕೆ ಅಪವಾದವೆಂಬಂತೆ ಅಗತ್ಯಕ್ಕೆ ತಕ್ಕಂತೆ ಸುಸಂಭದ್ಧ ವಾಕ್ಯ ಸರಣಿಯನ್ನು ಬಿಂಬಿಸುವ ಮಿತನುಡಿಗಳ ನಿರೂಪಣೆಯಲ್ಲಿ ಕರ್ನಾಟಕದಾದ್ಯಂತ ಜನಮನವನ್ನು ಗೆದ್ದು ಆಕರ್ಷಿಸಿ ಚತುರೆ ಎಂದೆನಿಸಿಕೊಂಡ ಕೆಲವೇ ಕೆಲವರಲ್ಲಿ ಅಪರ್ಣ ರವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದು ಹೇಳಬಹುದು.
ಅಪರ್ಣ ರವರು ಯಾವುದೇ ಬಗೆಯ ಸಮಾರಂಭವಾದರೂ ಅದಕ್ಕೆ ಹೊಂದಿಕೊಳ್ಳುವ ಮಾತುಗಾರಿಕೆಯನ್ನ ರೂಡಿಸಿಕೊಂಡು ಕಾಲಕ್ಕೆ ತಕ್ಕಂತೆ ನಿರೂಪಣ ಧ್ವನಿ ಅಸ್ತ್ರವನ್ನು ಬದಲಿಸುತ್ತಾ ಹೊಸ ಶೈಲಿಗೆ ಮುನ್ನುಡಿ ಬರೆದರು. ಲೋಪ ಬಾರದಂತೆ ನಿರೂಪಣೆಯನ್ನು ಮಾಡಿಕೊಳ್ಳುವುದು ಇವರು ಅರ್ಪಿಸಿಕೊಂಡಿರುವ ಸಿದ್ದಿಯಾಗಿತ್ತು. ಶಬ್ದ ಸಂಗ್ರಹ, ಅನುಭವ, ಧ್ವನಿ ಶೈಲಿ ಈ ಎಲ್ಲಾ ಆಯಾಮಗಳೊಂದಿಗೆ ವೇದಿಕೆ ಏರುವ ಇವರ ಮಾತುಗಳನ್ನು ಕೇಳಬೇಕೆನಿಸುತ್ತಿತ್ತು ಇವರ ನಿರೂಪಣೆಯಲ್ಲಿ ಮಾನವೀಯ ಮೌಲ್ಯಗಳನ್ನು ಬಿಂಬಿಸುವಂತಹ ಜಾಣ್ ನುಡಿಗಳು ಮಣಿಸರದಲ್ಲಿ ಹವಳ ಪೋಣಿಸಿದಂತಿರುತ್ತದ್ದವು.
ಅಪರ್ಣರವರ ಮಧುರ ಧ್ವನಿಯ ಹಿಡಿತ ಮಾನವೀಯ ಸ್ಪರ್ಶ ಮೂಡಿಸುತ್ತಿತ್ತು.. ನಮಗೆಲ್ಲ ಸ್ಪೂರ್ತಿಯಾಗಿದ್ದ ಅಪರ್ಣರವರು ಇಹಲೋಕ ತ್ಯಜಿಸಿದ್ದಾರೆ, ಕನ್ನಡ ಭಾಷೆಗೊಂದು ಭಾವ ತುಂಬಿದ ಅಪರ್ಣರವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು.
ಯಡೇಹಳ್ಳಿ ಆರ್ ಮಂಜುನಾಥ್
9901606220