. ವ್ಯತ್ಯಯಗಳಿಗೆ ವಿರಾಮವೆಂದು….?
ಆಲೂರು ತಾಲೂಕು ಪ್ರಾಯಶಃ ಬೇಡದ ಕೂಸು..! ಈ ಜಿಲ್ಲೆಗೆ, ಈ ರಾಜ್ಯಕ್ಕೆ, ಈ ರಾಜಕೀಯಕ್ಕೆ, ಈ ಅಧಿಕಾರಿಗಳಿಗೆ, ಈ ವ್ಯವಸ್ಥೆಗೆ, ಈ ವಿಧಾನಸಭಾ ಕ್ಷೇತ್ರಕ್ಕೆ…. ಇಲ್ಲಿ ನಮ್ಮವರೆಂಬ ಶಾಸಕರಿಲ್ಲ, ನಮ್ಮದೇ ಎಂಬ ಸ್ವತಂತ್ರ ಕರಾರಸಾಸಂಸ್ಥೆಯ ಡಿಪೋ ಇಲ್ಲ, ಬಸ್ ವ್ಯವಸ್ಥೆಗೆ ಹಾಸನದ ಡಿಪೋಗಳು ಸಹಕರಿಸಬೇಕು, ಅಥವಾ ಚಿಕ್ಕಮಗಳೂರು ಡಿವಿಜನ್ ನ ಸಕಲೇಶಪುರ ಡಿಪೋದ ಬಸ್ಸುಗಳೇ ಗಟ್ಟಿ,
ಇವೆಲ್ಲಾ ಸೋರುವ ಬಸ್ ಗಳು, ನಾಮಫಲಕ ನೋಡಿ ಎಕ್ಸ್ ಪ್ರೆಸ್ ದರ ನೀಡಿ ಪ್ರಯಾಣ ಮಾಡುತ್ತೇವೆ, ಇದಂತೂ ಮಲೆನಾಡಿಗರನ್ನು ವಿಪರೀತ ಶೋಷಿಸುವ ವ್ಯವಸ್ಥೆ. ನಾಲ್ಕು ಕಿ. ಮೀ. ಗೆಲ್ಲಾ ಒಂದೊಂದು ಹಂತವೆಂದು ಗುರುತಿಸಿ ಅದರಲ್ಲೂ ನಮ್ಮನ್ನು ಸುಲಿಗೆ ಮಾಡುತ್ತಿರುವುದು ಹಗಲು ದರೋಡೆಯಲ್ಲವೇ..? ನಮಗೆ ಈ ದುರವಸ್ಥೆಯಿಂದ ಮುಕ್ತಿಯೆಂದು..? ಕೊಡಿಸುವರಾರು..?!
ತಾಲೂಕಿಗೆ ನಾಲ್ಕು ಹೋಬಳಿಗಳಿವೆ, ಆದರೆ ನಮ್ಮ ಪುಣ್ಯವೇನೋ ಎಂಬಂತೆ ಒಂದು ವಿದ್ಯುತ್ ಉಪಕೇಂದ್ರ ಕೆ ಹೊಸಕೋಟೆ ಹೋಬಳಿಯ ಮಗ್ಗೆಯಲ್ಲಿದ್ದರೂ ನಮಗೆ ಮಾತ್ರಾ ಸೀಮಿತವಲ್ಲ, ಉಳಿದ ಮೂರೂ ಹೋಬಳಿಗಳು ಬಯಲುಸೀಮೆ ವ್ಯಾಪ್ತಿಯೆಂದು ಪರಿಗಣಿಸಿ ಆ ಪ್ರದೇಶಗಳ ಬೇಡಿಕೆ ಪೂರೃಸಿ ಉಳಿದ ವಿದ್ಯುತ್ ನಮಗೆ..! ಅದರಲ್ಲೂ ವಿತರಣಾ ವ್ಯವಸ್ಥೆ ಅರಣ್ಯ ಮತ್ತು ತೋಟಗಳ ನಡುವೆ ಹಾಯ್ದು ಹೋಗಿದ್ದು, ಸಂಜೆ ವಿದ್ಯುತ್ ಕೈಕೊಟ್ಟರೆ ಮರುದಿನ ಮಧ್ಯಾಹ್ನದ ವೇಳೆಗೇ ಮತ್ತೆ ವಿದ್ಯುತ್ ದರ್ಶನ..! ಮಳೆಗಾಲವಾದರಂತೂ ನಮ್ಮ ಗತಿ ಆ ದೇವರಿಗೇ ಪ್ರೀತಿ.. ವಾರಗಟ್ಟಲೆ ಕತ್ತಲ ವಾಸ, ಕುಡಿಯುವ ನೀರಿಗೂ ಪರದಾಟ, ಮನೆಗಳಲ್ಲಿ ವಿದ್ಯುತ್ ಇರದೇ ಅಡಿಗೆಗೂ ಸಂಕಟ..!
ಇನ್ನು ನಮಗೆ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಉಪಕೇಂದ್ರವೂ ವಿದ್ಯುತ್ ಪೂರೈಕೆ ಮಾಡುತ್ತದೆ, ಆದರೆ ಮಗ್ಗೆ ಕೇಂದ್ರದಂತೆಯೇ ನಿರ್ವಹಣೆಯಿದ್ದು ಎರಡರ ನಡುವೆ ಏನೇನೂ ವ್ಯಯತ್ಯಾಸವಿಲ್ಲ… ನಾವು ಎಲ್ಲದರಲ್ಲೂ ಕಡೆಯಲ್ಲಿರುವವರು, ಇತ್ತ ಮಗ್ಗೆ, ಅತ್ತ ಬಾಳ್ಳುಪೇಟೆ ಎರಡೂ ದೂರ ಸುಮಾರು 14 ಕಿ ಮೀ ಗಳು. ನಾವು ಕಡೆಯಲ್ಲಿರುವ ಕಾರಣ ನಮಗೆ ವರ್ಷದ ಬಹುತೇಕ ದಿನಗಳು ವಿದ್ಯುತ್ ಇರದು..! ಇದ್ದರೂ ಬಹಳ ಸಲ ಗುಣಮಟ್ಟದ ವಿದ್ಯುತ್ ಮರಳುಗಾಡಿನಲ್ಲಿ ನೀರರಸಿದಂತೆ..
ಈ ಗಡಿ ಭಾಗಕ್ಕೆ ವಿದ್ಯುತ್ ಉಪಕೇಂದ್ರ ಸ್ಥಾಪನೆ ಶೀಘ್ರವಾಗಿ ಆಗಬೇಕಿದೆ, ನಮ್ಮಲ್ಲಿ ಕಾಡಾನೆ ಹಾವಳಿಯ ಕಾರಣಕ್ಕೆ ರಾತ್ರಿ ಹೊರಹೋಗಲು ಭಯಪಡುವ ಸ್ಥಿತಿಯಿದೆ, ಪಾಪ..! ಪವರ್ ಮನ್ ಗಳೂ ಅಷ್ಟೇ.. ಅವರದ್ದೂ ಜೀವವಲ್ಲವೇ..?
ಈ ಎಲ್ಲಾ ಕಾರಣಗಳು ನಮ್ಮನ್ನು ಕತ್ತಲೆಗೆ ದೂಡಿವೆ.
ಇನ್ನಾದರೂ ಇಂಧನ ಇಲಾಖೆ ಇದನ್ನು ತುರ್ತೆಂದು ಭಾವಿಸಿ, ಈ ಭಾಗಕ್ಕೆಂದೇ ವಿಶೇಷವಾಗಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಿ ಮಲೆನಾಡಿಗರನ್ನೂ ವಿಶ್ವಾಸಕ್ಕೆ ಪಡೆಯಲು ಈ ಮೂಲಕ ಕೋರುತ್ತೇವೆ..
ಸತ್ಯ ಹರಿಹಳ್ಳಿ