ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್: ಡಿಜಿಟಲ್ ಬೆಳೆ ಸಮೀಕ್ಷೆ ಘೋಷಣೆ
ಪ್ರಗತಿವಾಹಿನಿ ಸುದ್ದಿ: 2024-25ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ರೈತರು ಹಾಗೂ ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಈ ನಿಧಿಯಿಂದ ಕೃಷಿ ಹಾಗೂ ಸಂಬಂಧಿತ ಕ್ಷೇತ್ರಗಳಿಗೆ ಯೋಜನೆಗಳನ್ನು ರೂಪಿಸಲಾಗುವುದು. 5 ರಾಜ್ಯಗಳಲ್ಲಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲು ನಿರ್ಧರಿಸಲಾಗಿದೆ ಎಂದರು.
ಒಂದು ವರ್ಷದಲ್ಲಿ 1 ಕೋಟಿ ರೈತರು ನೈಸರ್ಗಿಕ ಕೃಷಿ ವ್ಯಾಪ್ತಿಗೆ ಬರಲಿದ್ದಾರೆ. ಸಾವಯವ ಕೃಷಿಗೆ ಆದ್ಯತೆ ನೀಡಲಾಗುವುದು. ಹವಾಮಾನ ಸ್ನೇಹಿ ಬೀಜಗಳನ್ನು ಅಭಿವೃದ್ಧಿ, ಎಣ್ಣೆ ಕಾಳುಗಳ ಉತ್ಪಾದನೆ, ಶೇಖರಣೆ ಹಾಗೂ ಮಾರುಕಟ್ಟೆಗಳಿಗೂ ಉತ್ತೇಜನ ನೀಡಲಾಗುವುದು.
ರೈತರ ಅನುಕೂಲಕ್ಕಾಗಿ ಡಿಜಿಟಲ್ ಬೆಳೆ ಸಮೀಕ್ಷೆ ಜಾರಿಗೆ ಬರಲಿದೆ. ತರಕಾರಿ ಉತ್ಪಾದನೆ ಮತ್ತು ಪೂರೈಕೆ ಚೈನ್ ಬಲಗೊಳಿಸಲು ಹೆಚ್ಚಿನ ಎಫ್ ಪಿಒ ಗಳನ್ನು ರಚಿಸಲಾಗುವುದು. ಕೃಷಿ ಭೂಮಿ ಹಾಗೂ ರೈತರ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುವುದು ಎಂದರು.