ಬೆಳಗಾವಿ: ಸುವರ್ಣ ಸೌಧದ ಮುಂದೆ ಖರ್ಗೆಯಿಂದ ಗಾಂಧೀಜಿ ಪ್ರತಿಮೆ ಅನಾವರಣ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ಸುವರ್ಣ ವಿಧಾನಸೌಧ ಮುಂದೆ ಮಹಾತ್ಮ ಗಾಂಧೀಜಿ ಕಂಚಿನ ಪುತ್ಥಳಿ ಅನಾವರಣಗೊಂಡಿತು.
25 ಅಡಿ ಎತ್ತರದ ಬಾಪೂಜಿ ಪುತ್ಥಳಿಯನ್ನು ಚರಕ ನೇಯ್ಯುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಾರ್ಪಣೆಗೊಳಿಸಿದರು.
ಈ ವೇಳೆ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಡಿಸಿಎಂ ಡಿ.ಕೆ. ಶಿವಕುಮಾರ್ , ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ್ , ಸಚಿವರಾದ ಹೆಚ್.ಕೆ. ಪಾಟೀಲ್ , ಡಾ. ಜಿ. ಪರಮೇಶ್ವರ್ , ಸತೀಶ್ ಜಾರಕಿಹೊಳಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅನಾರೋಗ್ಯದಿಂದ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಗಾಂಧೀಜಿ ಪ್ರತಿಮೆ ಉದ್ಘಾಟನೆ ಆಗುತ್ತಿದ್ದಂತೆ ಇತ್ತ ಸುವರ್ಣಸೌಧದ ಮುಂಭಾಗದಲ್ಲಿ ಸಿಡಿಮದ್ದುಗಳನ್ನು ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು.