ಮಂಗಳೂರು ನಡು ರಸ್ತೆಯಲ್ಲಿ ಕೊಚ್ಚಿ ಹಿಂದೂ ಕಾರ್ಯಕರ್ತನ ಬರ್ಭರ ಹತ್ಯೆ,
ದಕ್ಷಿಣ ಕನ್ನಡ ಬಂದ್, ಮಂಗಳೂರಿನಲ್ಲಿ ನಿಷೇಧಾಜ್ಞೆ
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಮಂಗಳೂರು ಹೊರವಲಯದ ಬಜಪೆ ಕಿನ್ನಿಪದವು ಬಳಿ ನೆನ್ನೆ ರಾತ್ರಿ ಕೊಚ್ಚಿ ಕೊಲೆ ಮಾಡಲಾಗಿದೆ. ಇನ್ನು ಕೊಲೆಯಾದ ಸುಹಾಸ್ ಶೆಟ್ಟಿ ಬಿಜೆಪಿ ಕಾರ್ಯಕರ್ತ ಪ್ರವಿಣ್ ನೆಟ್ಟಾರ್ ಹತ್ಯೆಗೆ ಪ್ರತಿಕಾರವಾಗಿ 2022ರ ಜುಲೈ 28ರಂದು ನಡೆದಿದ್ದ ಫಾಜಿಲ್ ಕೊಲೆ ಪ್ರಕರಣ ಆರೋಪಿಯಾಗಿದ್ದ. ಇದೇ ಸೇಡಿಗೆ ಇದೀಗ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಈ ಕೊಲೆಯಿಂದಾಗಿ ಮತ್ತೆ ಕರಾವಳಿ ಉದ್ವಿಗ್ನಗೊಂಡಿದ್ದು, ಮುಂಜಾಗ್ರತಾಕ್ರಮವಾಗಿ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಮಂಗಳೂರು ಹಲವೆಡೆ ನಾಕಾಬಂದಿ ಹಾಕಲಾಗಿದ್ದು, ಹೀಗಾಗಿ ಮಂಗಳೂರು ನಗರಕ್ಕೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.
ಇನ್ನು ಈ ಬಗ್ಗೆ ನೆನ್ನೆ ರಾತ್ರಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಇನೋವಾ ಕಾರಿನಲ್ಲಿ ಸಹಚರರ ಜೊತೆ ತೆರಳುತ್ತಿದ್ದ ಸುಹಾಸ್ ಕಾರು ಅಡ್ಡಗಟ್ಟಿ ತಲ್ವಾರ್ಗಳಿಂದ ಹಲ್ಲೆ ಮಾಡಿದ್ದಾರೆ. ಗೂಡ್ಸ್ ವಾಹನ, ಕಾರಿನಲ್ಲಿ ಬಂದು ಸುಹಾಸ್ ಹತ್ಯೆಗೈದಿದ್ದಾರೆ. ಸುಹಾಸ್ ಶೆಟ್ಟಿಯನ್ನೇ ಟಾರ್ಗೆಟ್ ಮಾಡಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಲಾಗಿದ್ದು, ಆರೋಪಿಗಳ ಪತ್ತೆಗಾಗಿ ತಂಡ ರಚಿಸುತ್ತೇವೆ. ಇನ್ನು ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಮಂಗಳೂರು ನಗರದಲ್ಲಿ ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗುತ್ತೆ. ಇದು ಪ್ರತೀಕಾರದ ಹತ್ಯೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಬಂದ್, ಮಂಗಳೂರಿನಲ್ಲಿ ನಿಷೇಧಾಜ್ಞೆ
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಬಂದ್ಗೆ ಕರೆ ನೀಡಿದೆ. ಶುಕ್ರವಾರ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೂ ದಕ್ಷಿಣ ಕನ್ನಡ ಜಿಲ್ಲೆ ಬಂದ್ಗೆ ಕರೆ ನೀಡಲಾಗಿದ್ದು ಹೋಟೆಲ್, ಅಂಗಡಿ ಮುಂಗಟ್ಟುಗಳು ಬಂದ್ ಆಗಿರಲಿವೆ. ಅದೇ ರೀತಿ, ಖಾಸಗಿ ಬಸ್ ಸಂಚಾರ ಕೂಡ ಸ್ಥಗಿತಗೊಳ್ಳಲಿದೆ. ಅಲ್ಲದೆ, ಮಂಗಳೂರಿನಿಂದ ಬಂಟ್ವಾಳದ ಕಾರಿಂಜದ ಪುಳಿಮಜಲು (ಸುಹಾಸ್ ಶೆಟ್ಟಿ ನಿವಾಸ) ತನಕ ಜಾಥಾ ಮೂಲಕ ಮೃತದೇಹದ ಸಾಗಾಟಕ್ಕೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ನಿಷೇಧಾಜ್ಞೆ
ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ. ಬಿಎನ್ಎಸ್ ಕಲಂ 163 ಅಡಿಯಲ್ಲಿ ಮೇ 2 ರ ಮುಂಜಾನೆ 6 ಗಂಟೆಯಿಂದ ಮೇ 6 ರ ಮುಂಜಾನೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆದೇಶದಲ್ಲಿ ತಿಳಿಸಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಬಂದ್ ಆಗಿದೆ. ಬಸ್ ಓಡಿಸಿದರೆ ನಮಗೂ ತೊಂದರೆಯಾಗಬಹುದು. ಈಗಾಗಲೇ ಬಸ್ಗಳಿಗೆ ಕಲ್ಲು ತೂರಾಟ ಮಾಡಿದ್ದಾರೆ. ಇವತ್ತು ಇಡೀ ದಿನ ಬಸ್ ಬಂದ್ ಇರುತ್ತದೆ ಎಂದು ಖಾಸಗಿ ಬಸ್ ಚಾಲಕರು ತಿಳಿಸಿದ್ದಾರೆ. ಬಸ್ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.
ಸದ್ಯ ಕೆಎಸ್ಆರ್ಟಿಸಿ ಬಸ್ ಸಂಚಾರ ನಡೆಯುತ್ತಿದೆ. ಮತ್ತೊಂದೆಡೆ, ಅಂಗಡಿ ಮುಂಗಟ್ಟುಗಳು ಸಹ ಬಂದ್ ಆಗಿವೆ. ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿದೆ.