ಹಾಸನದ ಅಧಿದೇವತೆ ಹಾಸನಾಂಬೆ ತಾಯಿ ಜಾತ್ರಾ ಮಹೋತ್ಸವ 2024ರ ದಿನಾಂಕ ಘೋಷಣೆಯಾಗಿದೆ.
ವರ್ಷಕ್ಕೊಮ್ಮೆ ತಾಯಿ ದರ್ಶನ ಭಾಗ್ಯ ಕರುಣಿಸುತ್ತಾಳೆ. ಈ ಸಮಯದಲ್ಲಿ ದೇವಿಯ ದರ್ಶನ ಪಡೆಯಲು ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಹಾಸನಕ್ಕೆ ಆಗಮಿಸುತ್ತಾರೆ. ಜಾತ್ರೆ ಬಳಿಕ ಮತ್ತೆ ದೇವಾಲಯ ಬಾಗಿಲು ತೆರೆಯುವುದು ಮುಂದಿನ ವರ್ಷ.
ಹಾಸನ ಸಂಸದ ಶ್ರೇಯಸ್ ಪಟೇಲ್ ನೇತೃತ್ವದಲ್ಲಿ ಮಂಗಳವಾರ ಹಾಸನ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹಾಸನಾಂಬೆ ಜಾತ್ರೆ-2024ರ ಪೂರ್ವಭಾವಿ ಸಭೆ ನಡೆಯಿತು.
ಜಾತ್ರೆಯ ದಿನಾಂಕದ ಕುರಿತು ಚರ್ಚಿಸಲಾಯಿತು ಮತ್ತು ಜಾತ್ರಾ ಮಹೋತ್ಸವದ ತಯಾರಿಯ ಕುರಿತು ಅಧಿಕಾರಿಗಳ ಜೊತೆ ವಿವರವಾಗಿ ಸಂಸದರು ಚರ್ಚಿಸಿದರು.
2024ನೇ ಸಾಲಿನ ಹಾಸನಾಂಬೆ ಜಾತ್ರೆ ಹಾಗೂ ದರ್ಶನ ಮಹೋತ್ಸವ ಅಕ್ಟೋಬರ್ 24 ರಿಂದ 11 ದಿನಗಳ ಕಾಲ ನಡೆಯಲಿದೆ. ಈ ಬಾರಿ ತಾಯಿಯ ದರ್ಶನಕ್ಕೆ ಸುಮಾರು 13 ರಿಂದ 15 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದ್ದು, ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಸಭೆಯಲ್ಲಿ ಸಂಸದರು ಸೂಚನೆ ನೀಡಿದರು.
ಸಭೆಯಲ್ಲಿ ಹಾಸನ ಜಿಲ್ಲಾಧಿಕಾರಿ ಸತ್ಯಭಾಮ, ಹಾಸನ ಶಾಸಕ ಸ್ವರೂಪ ಪ್ರಕಾಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ದೇವಸ್ಥಾನದ ಆಡಳಿತ ಅಧಿಕಾರಿ ಹಾಗೂ ಉಪ ವಿಭಾಗ ಅಧಿಕಾರಿ ಮಾರುತಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವರ್ಷಕ್ಕೊಮ್ಮೆ ಮಾತ್ರ ದರ್ಶನ: ಹಾಸನಾಂಬೆ ತಾಯಿ ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುತ್ತಾಳೆ. ಆಶ್ವೀಜ ಮಾಸದ ಮೊದಲ ಗುರುವಾರ ಅರಸು ವಂಶಸ್ಥ ನಂಜರಾಜೆ ಅರಸ್ ಸಂಪ್ರದಾಯದಂತೆ ಬಾಳೆ ಕಂಬ ಕಡಿದ ನಂತರ ವಿವಿಧ ಪೂಜೆಗಳನ್ನು ಮಾಡಿ, ಶಾಸ್ತ್ರೋಕ್ತವಾಗಿ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ.
ಗರ್ಭಗುಡಿ ಬಾಗಿಲು ತೆರೆದ ವೇಳೆ ಕಳೆದ ವರ್ಷ ಹಚ್ಚಿದ್ದ ದೀಪ ಆರಿರುವುದಿಲ್ಲ. ನೈವೇದ್ಯ ಹಳಸಿರುವುದಿಲ್ಲ. ಸಾಮಾನ್ಯವಾಗಿ ಗರ್ಭಗುಡಿ ಬಾಗಿಲು ತೆರೆದ ದಿನ ಜನರಿಗೆ ದೇವರ ದರ್ಶನ ಲಭ್ಯವಿರುವುದಿಲ್ಲ. ಉಳಿದ ದಿನ ನೈವೇದ್ಯ ಸಮಯ ಬಿಟ್ಟು ತಡರಾತ್ರಿ ತನಕ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ.
ಹಾಸನಾಂಬೆ ದೇವಿ ಬೇಡಿದ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಲಕ್ಷಾಂತರ ಭಕ್ತರಲ್ಲಿದೆ. ಆದ್ದರಿಂದ ಹಾಸನ ಜಿಲ್ಲೆ ಮಾತ್ರವಲ್ಲದೆ ರಾಜ್ಯ, ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕಾಗಿ ಆಗಮಿಸುತ್ತಾರೆ. ಜಾತ್ರೆ ಮುಗಿದ ಬಳಿಕ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ.
ಹಾಸನಾಂಬೆ ದೇವಾಲಯ ಬಾಗಿಲು ತೆರೆಯುತ್ತಿದ್ದಂತೆಯೇ ವಿವಿಧ ಸಚಿವರು, ಶಾಸಕರು ಆಗಮಿಸುತ್ತಾರೆ. ವರ್ಷಕ್ಕೆ ಒಮ್ಮೆ ಮಾತ್ರ ದೇವಾಲಯ ಬಾಗಿಲು ತೆರೆಯುವ ಕಾರಣ ಲಕ್ಷಾಂತರ ಭಕ್ತರು ಸಹ ಆಗಮಿಸುತ್ತಾರೆ.
ಹಾಸನ ಜಿಲ್ಲಾಡಳಿತ ಭಕ್ತರ ಅನುಕೂಲಕ್ಕಾಗಿ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡುತ್ತದೆ. ಪ್ರಸಾದವಾಗಿ ಲಡ್ಡು ವಿತರಣೆ ಮಾಡಲಾಗುತ್ತದೆ. ಮುಂಜಾನೆಯಿಂದ ತಡರಾತ್ರಿ ತನಕ ಪ್ರತಿದಿನ ಸಾವಿರಾರು ಭಕ್ತರು ದೇವಿಯ ದರ್ಶನಕ್ಕಾಗಿ ಆಗಮಿಸುತ್ತಾರೆ. ಜಾತ್ರೆ ಮುಗಿದ ಬಳಿಕ ಸಂಪ್ರದಾಯದಂತೆ ಪೂಜೆ ಸಲ್ಲಿಸಿ, ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ.