ಹಾವೇರಿಯಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ – ಕ್ಯಾಮರಾ ನೋಡ್ತಿದ್ದಂತೆ ಸಿಬ್ಬಂದಿ ಜೂಟ್!
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಾಲ, ಬಡ್ಡಿಯ ಹಾವಳಿ ಹೆಚ್ಚಾಗಿದ್ದು, ಸಾಲದ ಸುಳಿಯಲ್ಲಿ ಸಿಲುಕಿದವರು ಬಡ್ಡಿಯ ಕಿರುಕುಳ ತಾಳಲಾರದೇ ಊರೇ ಬಿಟ್ಟು ಹೋಗುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಾಟಕ್ಕೆ ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಜಿಲ್ಲೆ, ಜಿಲ್ಲೆಗಳಲ್ಲೂ ಮೈಕ್ರೋ ಫೈನಾನ್ಸ್ ಸಾಲದ ಸಂತ್ರಸ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಇದೀಗ ಹಾವೇರಿಯ ರಾಣೆಬೆನ್ನೂರು ನಗರದಲ್ಲಿ ಹೈಡ್ರಾಮಾ ನಡೆದಿದ್ದು, ಕ್ಯಾಮರಾ ಕಂಡು ಮುಖ ಮುಚ್ಚಿಕೊಂಡು ಮೈಕ್ರೋ ಫೈನಾನ್ಸ್ ಪ್ರತಿನಿಧಿ ಕಳ್ಳರಂತೆ ಓಡಿರುವ ಘಟನೆ ನಡೆದಿದೆ. ರಾಣೆಬೆನ್ನೂರಿನ ಸಿದ್ದೇಶ್ವರ ನಗರದಲ್ಲಿ ಸೂರಜ್ ಎಂಬುವರ ಕುಟುಂಬ ನಡೆಸುತ್ತಿರುವ ನ್ಯೂ ಅಂಬಿಕಾ ಸಾವಜಿ ಹೊಟೇಲ್ ಹಾಗೂ ಮನೆ ಹಿರಿಯರ ಅನಾರೋಗ್ಯದ ನಿಮಿತ್ತ ಮೈಕ್ರೋ ಫೈನಾನ್ಸ್ನಿಂದ ಸುಮಾರು ಎರಡುವರೆ ಲಕ್ಷ ರೂ. ಸಾಲ ಪಡೆದಿತ್ತು.
ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ‘ನೀವು ಆತ್ಮಹ*ತ್ಯೆ ಮಾಡಿಕೊಳ್ಳಿ, ನಮಗೆ ಗೊತ್ತಿಲ್ಲ, ನಮಗೆ ದುಡ್ಡು ಕಟ್ಟಿ ಎಂದು ಕಿರುಕುಳ ನೀಡ್ತಿದ್ದರು. ಮನೆಯಲ್ಲಿದ್ದ ತಮ್ಮ ಅಜ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ಸಲ ಕಂತು ಕಟ್ಟುತ್ತೇವೆ ಎಂದರೂ ಕೇಳದ ಮೈಕ್ರೋ ಫೈನಾನ್ಸ್ ಸಿಬ್ಬಂದಿ, ಬೆಳಿಗ್ಗೆಯಿಂದಲೂ ಕಂತು ಕಟ್ಟುವಂತೆ ಸೂರಜ್ ಕುಟುಂಬಕ್ಕೆ ಟಾರ್ಚರ್ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ವೇಳೆ ಮಾಧ್ಯಮಗಳ ಕ್ಯಾಮರಾ ಕಂಡು ಮುಖ ಮುಚ್ಚಿಕೊಂಡು ಮೈಕ್ರೋ ಫೈನಾನ್ಸ್ ಪ್ರತಿನಿಧಿ ಕಳ್ಳರಂತೆ ಓಡಿ ಹೋಗಿರುವ ಘಟನೆ ನಡೆದಿದೆ.