ಸಾರ್ವಜನಿಕ ಹಣದ ಹಗಲು ದರೋಡೆ.
ಇದು ಲಂಚವಲ್ಲ, ಭ್ರಷ್ಟಾಚಾರವಲ್ಲ,
ಅದಕ್ಕಿಂತ ದೊಡ್ಡ ಶಬ್ದಗಳಲ್ಲಿ ವರ್ಣಿಸಬೇಕೆಂದರೆ ಕಳ್ಳತನ ಮತ್ತು ಹಗಲು ದರೋಡೆ.
ಕರ್ನಾಟಕ ಸರ್ಕಾರದ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಸುಮಾರು 95 ಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆಯಾಗಿದೆ ಎಂಬ ಆರೋಪದ ಸುತ್ತ ಈಗಾಗಲೇ ಎಸ್ ಐ ಟಿ ತನಿಖೆ ಪ್ರಾರಂಭವಾಗಿದೆ. ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಒಂದಿಬ್ಬರು ಅಧಿಕಾರಿಗಳು ತಲೆ ತಪ್ಪಿಸಿಕೊಂಡಿದ್ದಾರೆ, ಮತ್ತೆ ಕೆಲವರ ಬಂಧನವಾಗಿದೆ. ಮಾನ್ಯ ಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆಯನ್ನು ನೀಡಿದ್ದಾರೆ.
ತೀರಾ ತೀರಾ ಗಂಭೀರ ಪ್ರಕರಣವಿದು. ಸರ್ಕಾರದ ಖಜಾನೆಯ ತೆರಿಗೆ ಹಣವನ್ನು ಅತ್ಯಂತ ಜವಾಬ್ದಾರಿಯಿಂದ ಕಾಪಾಡಿ, ಅದನ್ನು ಉಪಯೋಗಿಸಬೇಕಾದ ಜನರೇ ಒಂದು ಸ್ವಲ್ಪವೂ ಭಯ ಆತಂಕವಿಲ್ಲದೆ, ನೇರವಾಗಿಯೇ ಹಣವನ್ನು ಯಾರು ಯಾರಿಗೋ ವರ್ಗಾವಣೆ ಮಾಡಿದ್ದಾರೆಂದರೆ, ಇವರುಗಳಿಗೆ ಕಾನೂನಿನ ಬಗ್ಗೆ, ಧರ್ಮದ ಬಗ್ಗೆ, ದೇವರ ಬಗ್ಗೆ ಯಾವುದೇ ನಂಬಿಕೆಯು ಇಲ್ಲ, ಆತ್ಮಸಾಕ್ಷಿಯೂ ಇಲ್ಲ. ಸಿಕ್ಕಷ್ಟು ಹಣ ದೋಚುವುದಷ್ಟೇ ಇವರ ಮನೋಭಾವ. ಇದರಲ್ಲಿ ಯಾರ ತಪ್ಪಿದೆಯೋ, ಯಾರ್ಯಾರ ಎಷ್ಟೆಷ್ಟು ಅಕ್ರಮಗಳಿವೆಯೋ ಗೊತ್ತಿಲ್ಲ. ಆದರೆ ಅಕ್ರಮ ನಡೆದಿರುವುದಂತೂ ಸ್ಪಷ್ಟವಾಗಿ ಗೋಚರಿಸುತ್ತಿದೆ.
ನಾವುಗಳು ಎಷ್ಟೊಂದು ಕಷ್ಟಪಟ್ಟು ಒಂದೊಂದು ರೂಪಾಯಿಯನ್ನು ಕೂಡಿಟ್ಟು ನಮ್ಮ ಅತ್ಯವಶ್ಯಕ ವಸ್ತುಗಳನ್ನು ಕೊಂಡುಕೊಳ್ಳುವಾಗ, ಆ ಮೂಲಕ ಸರ್ಕಾರಕ್ಕೆ ತೆರಿಗೆಯನ್ನು ಕಟ್ಟಿ ನಮ್ಮ ರಕ್ಷಣೆಗೆ ಸರ್ಕಾರವಿರುತ್ತದೆ, ನಮ್ಮ ಹಣವನ್ನು ಒಳ್ಳೆಯ ಮಾರ್ಗದಲ್ಲಿ ಖರ್ಚು ಮಾಡುತ್ತದೆ ಎಂಬ ಭರವಸೆಯೊಂದಿಗೆ ನಾವಿದ್ದರೇ, ಈ ದುಷ್ಟರು ನೇರವಾಗಿಯೇ ದರೋಡೆ ಮಾಡಿದರೆ ನಮ್ಮ ಗತಿ ಏನು ?.
ಈ ಹಗರಣ ತುಂಬಾ ಪ್ರಾಮುಖ್ಯ ಪಡೆಯುವುದು ಏಕೆಂದರೆ ಇದು ಯಾವುದೋ ಕೆಲಸಕ್ಕಾಗಿ ಪಡೆದ ಲಂಚವಲ್ಲ ಅಥವಾ ಇನ್ಯಾವುದೋ ಕಾಮಗಾರಿಗಾಗಿ ಬಿಲ್ ಸಮೇತ ಪಾವತಿಸಬೇಕಾದ ಹಣವು ಅಲ್ಲ. ನನಗಿರುವ ಮಾಹಿತಿಯ ಪ್ರಕಾರ ಉದ್ದೇಶಪೂರ್ವಕವಾಗಿಯೇ ಯಾರೋ ಈ ಹಣವನ್ನು ಲಪಟಾಯಿಸಲು ಕೃತಕವಾಗಿ ಸೃಷ್ಟಿಯಾದ ದಾಖಲೆಗಳ ಮುಖಾಂತರ ಹಣ ವರ್ಗಾವಣೆಯಾಗಿದೆ. ಇದು ಬಯಲಾದ ಒಂದು ಘಟನೆ ಮಾತ್ರ. ಈ ರೀತಿ ಆ ವ್ಯಕ್ತಿಗಳು ಮಾಡಿದ್ದಾರೆಂದರೆ ಅವರಿಗೆ ಈ ರೀತಿಯ ಚಟುವಟಿಕೆಗಳ ಹಿನ್ನೆಲೆ ಇರಲೇಬೇಕು, ಇವರು ಹಿಂದೆಯೂ ಸಹ ಬೇರೆ ಬೇರೆ ಇಲಾಖೆಗಳಲ್ಲಿ ಈ ರೀತಿಯ ಅಥವಾ ಇದೇ ರೂಪದ ಬೇರೆ ರೀತಿಯ ವಂಚನೆಗಳಲ್ಲಿ ಭಾಗಿಯಾಗಿರಬಹುದು ಅಥವಾ ಇನ್ನು ಹಲವಾರು ಜನ ಇದೇ ರೀತಿ ಸರ್ಕಾರಿ ಹಣದ ಲೂಟಿ ಮಾಡುತ್ತಿರುತ್ತಾರೆ ಎಂದರ್ಥ…
ಸರ್ಕಾರಗಳು ತಮ್ಮ ಕೆಲಸದ ಒತ್ತಡದಿಂದಾಗಿ ಇಡೀ ವ್ಯವಸ್ಥೆಯನ್ನು ನಿಭಾಯಿಸುವುದು ಕಷ್ಟ ಎಂದು ಕೆಲವು ಹಿಂದುಳಿದ ಜಾತಿಗಳ ಅಭಿವೃದ್ಧಿಗಾಗಿ ಒಂದಷ್ಟು ನಿಗಮಗಳನ್ನು ಸ್ಥಾಪಿಸಿ, ಅದಕ್ಕೆ ಹಣಕಾಸಿನ ಸೌಲಭ್ಯ ಒದಗಿಸಿ, ಹಿಂದುಳಿದ, ದಲಿತ, ಅಲ್ಪಸಂಖ್ಯಾತರು ಬೇಗ ಅಭಿವೃದ್ಧಿ ಹೊಂದಲಿ ಎಂದು ನಿಗಮ ಸ್ಥಾಪಿಸಿದರೆ ಈ ದುರಾತ್ಮರು ಅಷ್ಟು ದೊಡ್ಡ ಮೊತ್ತವನ್ನು ದರೋಡೆ ಮಾಡಿದರೆ ವ್ಯವಸ್ಥೆಯ ಗತಿ ಏನು.
ಎಷ್ಟೊಂದು ಬಡತನ, ಎಷ್ಟೊಂದು ಅಸಹಾಯಕತೆ, ಎಷ್ಟೊಂದು ನೋವುಗಳು, ಬಿಸಿಲಿಗೆ ಫ್ಯಾನು ಎಸಿ ಇಲ್ಲ, ಮಳೆಗೆ ಸರಿಯಾದ ಸೂರಿಲ್ಲ, ಚಳಿಗೆ ಸರಿಯಾದ ಹೊದಿಕೆ ಇಲ್ಲ, ಎಷ್ಟೋ ಜನ ಕೂಲಿಯನ್ನು ಮಾಡಿದರೆ, ಅನೇಕರು ಹೊಟ್ಟೆಪಾಡಿಗಾಗಿ ದೇಹವನ್ನೇ ಮಾರಿಕೊಳ್ಳುವ ಪರಿಸ್ಥಿತಿ ಇದೆ. ಎಷ್ಟೋ ಮಕ್ಕಳು ಈಗಲೂ ಶಾಲಾ ಫೀಸು ಕಟ್ಟಲು ಒದ್ದಾಡುತ್ತಿದ್ದಾರೆ, ಎಷ್ಟೋ ಹಿರಿಯರು ಹಣದ ಕೊರತೆಯಿಂದ ಆಸ್ಪತ್ರೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ತೆರಿಗೆದಾರರ ಕೋಟಿ ಕೋಟಿ ಹಣ ಹೀಗೆ ದರೋಡೆಯಾದರೆ ಅದಕ್ಕೆ ನಾವು ಸಾಕ್ಷಿಯಾಗಿರುವುದು ಇನ್ನೂ ದುರಂತ.
ಸರ್ಕಾರದಲ್ಲಿ ಲೆಕ್ಕಪರಿಶೋಧನಾ ಇಲಾಖೆ (ಆಡಿಟಿಂಗ್ ಡಿಪಾರ್ಟ್ಮೆಂಟ್ ) ಎಂಬ ಇಲಾಖೆ ಇದೆ. ಯಾವುದೇ ರೀತಿಯ ಹಣ ದುರುಪಯೋಗವಾಗುವುದನ್ನು ಅದು ಹುಡುಕಿ, ಬಯಲಿಗೆಳೆದು ಕ್ರಮಬದ್ಧಗೊಳಿಸಲು ಇರುವ ಇಲಾಖೆ. ಆದರೆ ಅದು ಹೇಗಾಗಿದೆ ಎಂದರೆ ಮೊದಲಿಗೆ ಪೋಸ್ಟ್ ಮಾರ್ಟಂ, ನಂತರ ಶವ ಮೆರವಣಿಗೆ, ತದನಂತರ ಶವಸಂಸ್ಕಾರ ಈ ರೀತಿ ಎಲ್ಲವೂ ಮುಗಿದ ನಂತರ ಆ ಇಲಾಖೆ ಕಾರ್ಯನಿರ್ವಹಿಸುತ್ತದೆ. ಈ ಕಾರಣದಿಂದ ಈ ಲೆಕ್ಕ ಪರಿಶೋಧನೆ ಇಲಾಖೆಯನ್ನು ಮತ್ತೆ ಪುನರ್ ರಚಿಸಿ ಪ್ರಾರಂಭ, ಮಧ್ಯಮಾವಧಿ ಮತ್ತು ಕಾರ್ಯ ನಂತರ ಆಡಿಟಿಂಗ್ ಎಂದು ಮೂರು ರೀತಿಯಲ್ಲಿ ಆಡಿಟಿಂಗ್ ಮಾಡಬೇಕಾಗುತ್ತದೆ. ಆಗಲಾದರೂ ಈ ರೀತಿಯ ದರೋಡೆಗಳು ನಡೆಯುವುದು ಸ್ವಲ್ಪ ದಿನದ ಮಟ್ಟಿಗೆ ಕಡಿಮೆಯಾಗಬಹುದು. ಏಕೆಂದರೆ ಮುಂದೆ ಇದರಲ್ಲಿಯೂ ಲೋಪದೋಷಗಳನ್ನು ಕಂಡುಹಿಡಿದು ಅದನ್ನು ದುರುಪಯೋಗಸಿಕೊಳ್ಳುವ ಮನಸ್ಥಿತಿ ನಮ್ಮ ರಾಜಕಾರಣಿ ಮತ್ತು ಅಧಿಕಾರಿಗಳದ್ದು.
ಏನೇ ಆಗಲಿ ಇಷ್ಟೊಂದು ಬಹಿರಂಗ ಸರ್ಕಾರಿ ದರೋಡೆಗಳನ್ನು ಸಹಿಸಬಾರದು. ಇದಕ್ಕಾಗಿ ದೊಡ್ಡ ಮಟ್ಟದ ಸಾರ್ವಜನಿಕ ಪ್ರತಿಭಟನೆಯ ಅವಶ್ಯಕತೆ ಇದೆ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.