
ಕಾಫಿನಾಡನ್ನೇ ಕಬ್ಜಾ ಮಾಡಿರೋ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಇಂದಿಗೆ 300ರ ಗಡಿ ದಾಟಿದೆ. ಇದರಿಂದ ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಒಳಗೂ ಜನ, ಹೊರಗೂ ಜನಜಂಗುಳಿ ಸೇರಿದೆ. ಚಕ್ಕಮಗಳೂರು ಜಿಲ್ಲೆಯಲ್ಲಿರುವ ಆಸ್ಪತ್ರೆಗಳ ಮುಂದೆ ಜನಜಂಗುಳಿ
ಕಂಡುಬರುತ್ತಿರುವ ಚಿತ್ರಣವಾಗಿದೆ. ಬರದಿಂದ ಕಂಗೆಟ್ಟಿದ್ದ ಜಿಲ್ಲೆಯಲ್ಲಿ ಸದ್ಯಕ್ಕೆ ಉತ್ತಮ ಮಳೆಯಾಗುತ್ತಿದೆ. ಈ ಮಧ್ಯೆ ಡೆಂಗ್ಯೂ ಪ್ರಕರಣಗಳ ರುದ್ರನರ್ತನ ಕೂಡ ದಿನದಿಂದ ದಿನಕ್ಕೆ ಜಿಲ್ಲೆಯನ್ನ ಕಾಡುತ್ತಿದೆ. ಚಿಕ್ಕಮಗಳೂರು ತಾಲೂಕು ಒಂದರಲ್ಲೇ 250 ಪ್ರಕರಣಗಳಿದ್ದು ಜಿಲ್ಲೆಯಾದ್ಯಂತ 350 ಡೆಂಗ್ಯೂ ಪ್ರಕರಣಗಳು ತಾಂಡವವಾಡುತ್ತಿದೆ. ಅದೂ ಕಳೆದ ಎರಡು ತಿಂಗಳಲ್ಲೇ ಹೆಚ್ಚು. ಹೆಮ್ಮಾರಿ ಡೆಂಗ್ಯೂ ಈ ಪರಿ ಅಟ್ಯಾಕ್ ಮಾಡಿರೋದು ಆರೋಗ್ಯ ಇಲಾಖೆ ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ. ಜ್ವರ ಕಾಣಿಸಿಕೊಂಡರೆ ಸಾಕು ಡೆಂಗ್ಯೂ ಕಂಫರ್ಮ್ ಅನ್ನುವ ರೀತಿ ಆಗಿದೆ. ಸದ್ಯದಸ್ಥಿತಿ-ಗತಿ. ಆದ್ರೆ, ಆರೋಗ್ಯ ಇಲಾಖೆ ಅದೃಷ್ಟವಶಾತ್ ಈವರೆಗೂ ಸಾವು ಸಂಭವಿಸಿಲ್ಲ. ಜ್ವರ ಕಾಣಿಸಿಕೊಂಡರೇ ಮನೆಯಲ್ಲಿ ಔಷಧಿ ತೆಗೆದುಕೊಳ್ಳುವುದಾ ಬಿಟ್ಟು ಆಸ್ಪತ್ರೆ ಬಂದು ಚಿಕಿತ್ಸೆ ಪಡೆಯಿರಿ ಅಂತ ಮನವಿ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಬೆಡ್ ಗಳ ಸಮಸ್ಯೆ: ಇಷ್ಟದ್ರು ಇನ್ನು ಡೆಂಗ್ಯೂ ಪ್ರಕರಣಗಳ ಸಂಖ್ಯೆ ಇಳಿಮುಖದ ಲಕ್ಷಣ ಕಾಣ್ತಿಲ್ಲ. ತರೀಕೆರೆ, ಕಡೂರು, ಚಿಕ್ಕಮಗಳೂರು, ಮೂಡಿಗೆರೆ, ಎನ್. ಆರ್. ಪುರ, ಕೊಪ್ಪ ತಾಲೂಕುಗಳಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಒಂದು ದಶಕದ ಬಳಿಕ ಈ ಪರಿ ಮಹಾಮಾರಿ ಹರಡಿದ್ದು ಇದೇ ಮೊದಲು. ಬೇಸಿಗೆ ಅವಧಿಯಲ್ಲಿ ಮಳೆ ಇಲ್ಲದೆ ಚರಂಡಿ, ಮೋರಿ-ಕಾಲುವೆಗಳಲ್ಲಿ ನೀರು ನಿಂತು ಸೊಳ್ಳೆಗಳ ಲಾರ್ವ ಪ್ರಮಾಣ ಹೆಚ್ಚಾಗಿ ಸೊಳ್ಳೆಗಳ ಕಾಟವು ಜಿಲ್ಲೆಯಲ್ಲಿ ಮಿತಿ ಮೀರಿದೆ. ಇದರ ಪರಿಣಾಮ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣ ಅಂತಾರೆ ವೈದ್ಯರು. ಜೊತೆಗೆ ವಾರಕ್ಕೊಮ್ಮೆ ನೀರು ಬರುತ್ತೆ ಅಂತ ನೀರನ್ನ ಶೇಖರಿಸಿಕೊಂಡು ಮುಚ್ಚದೆ ಇರೋದ್ರಿಂದಲೂ ಡೆಂಗ್ಯೂ ಬಂದಿದೆ ಅನ್ನೋದು ವೈದ್ಯರ ಸ್ಪಷ್ಟನೆ. ರೋಗದಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಅವಶ್ಯಕತೆ ಇದ್ದರೆ ಮಾತ್ರ ಅಡ್ಮಿಟ್ ಮಾಡಿಕೊಳ್ಳಲಾಗುತ್ತಿದ್ದು, ಉಳಿದವರನ್ನು ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಾರೆ, ಡೆಂಗ್ಯೂ ಆತಂಕ ಬೇಡ, ಎಚ್ಚರವಿರಲಿ ಎನ್ನುವ ಸಂದೇಶವನ್ನು ಚಿಕ್ಕಮಗಳೂರು ಆರೋಗ್ಯ ಇಲಾಖೆ ನೀಡುತ್ತಿದ್ದು, ಸೊಳ್ಳೆಗಳಿಂದ ಸೂಕ್ತ ರಕ್ಷಣೆ ಪಡೆಯಲು ಜನರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ಆದರೂ, ಈ ಪರಿ ಡೆಂಗ್ಯೂ ಮಹಾಮಾರಿ ಜಿಲ್ಲೆಯನ್ನು ಕಾಡುತ್ತಿದ್ದು ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮತ್ತಷ್ಟು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೆಡ್ ಗಳ ಸಮಸ್ಯೆ ಎದುರಾದರು ಆಶ್ಚರ್ಯವಿಲ್ಲ.