ಬೆಂಗಳೂರು, ಮೇ 26: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ದೂರ ಸಂಚಾರದ ಮಾರ್ಗಗಳಲ್ಲಿ ಹಲವು ಬಸ್ಗಳನ್ನು ಓಡಿಸುತ್ತದೆ. ಈ ಬಸ್ಗಳು ಪ್ರಯಾಣಿಕರಿಗೆ ನೈಸರ್ಗಿಕ ಕರೆ, ಲಘು ವಿಶ್ರಾಂತಿ ಮತ್ತು ಊಟೋಪಚಾರಕ್ಕಾಗಿ ನಿಲುಗಡೆ ಮಾಡುತ್ತವೆ. ಹೀಗೆ ಬಸ್ ನಿಲುಗಡೆ ಮಾಡಲು ಮಾರ್ಗಸೂಚಿ, ನಿಯಮಗಳಿವೆ.ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ದೂರ ಸಂಚಾರದ ಬಸ್ಸುಗಳಿಗೆ ಮಾರ್ಗಮಧ್ಯೆ ಪ್ರಯಾಣಿಕರಿಗೆ ನೈಸರ್ಗಿಕ ಕರೆ, ಲಘು ವಿಶ್ರಾಂತಿ ಮತ್ತು ಊಟೋಪಚಾರಕ್ಕಾಗಿ ನಿಲುಗಡೆ ನೀಡುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ. 2017ರ ಆದೇಶವನ್ನು ಉಲ್ಲೇಖ ಮಾಡಲಾಗಿದೆ.ನಿಗಮವು ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ಬಗೆಯ ಸೌಲಭ್ಯಗಳನ್ನು ಕಲ್ಪಿಸಿದ್ದು, ದೂರ ಸಂಚಾರದ ಪ್ರಯಾಣಿಕರಿಗೆ 2 ರಿಂದ ಎರಡೂವರೆ ಗಂಟೆ ಪ್ರಯಾಣದ ನಂತರ, ಅಂದರೆ ಸುಮಾರು 80 ರಿಂದ 100 ಕಿ. ಮೀ. ಪ್ರಯಾಣದ ನಂತರ ದಣಿವು/ ಬಳಲಿಕೆಯನ್ನು ನಿವಾರಣೆಗೊಳಿಸಲು ಮಾರ್ಗಮಧ್ಯೆ 10 ರಿಂದ 15 ನಿಮಿಷಗಳ ಕಾಲ ಲಘು ವಿಶ್ರಾಂತಿ, ನೈಸರ್ಗಿಕ ಕರೆ ಮತ್ತು ಊಟೋಪಚಾರಕ್ಕಾಗಿ, ವಾಹನಗಳನ್ನು ಅನುಕೂಲಕರ ಸ್ಥಳದಲ್ಲಿ ನಿಲ್ಲಿಸಲು ಉತ್ತಮ ಸೌಲಭ್ಯ ಹೊಂದಿರುವ ಫಲಹಾರ ಮಂದಿರಗಳನ್ನು ನಿಗದಿ ಮಾಡಲಾಗುತ್ತಿದೆ ಎಂದು ಹೇಳಿದೆ.ಈ ವ್ಯವಸ್ಥೆಯಿಂದ ದೂರ ಸಂಚಾರದ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ನೀಡುವುದಲ್ಲದೆ, ನಿಗಮಕ್ಕೆ ಮಾರ್ಗಬದಿಯ ಫಲಹಾರ ಮಂದಿರಗಳಿಂದ ನಿಲುಗಡೆ ಶುಲ್ಕದ ರೂಪದಲ್ಲಿ ವಾಣಿಜ್ಯ ಆದಾಯವನ್ನು ಗಳಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಿಗದಿಪಡಿಸಿರುವ ಫಲಹಾರ ಮಂದಿರಗಳಲ್ಲಿ ಮೂಲಭೂತ ಸೌಲಭ್ಯ, ಶುಚಿತ್ವ, ಗುಣಮಟ್ಟದ ಆಹಾರದ ಕೊರತೆ ಮತ್ತು ತಿಂಡಿ ತಿನಿಸುಗಳಿಗೆ ಹೆಚ್ಚಿನ ದರಗಳನ್ನು ನಿಗದಿಪಡಿಸಿರುವ ಕುರಿತು ಸಾರ್ವಜನಿಕ ಪ್ರಯಾಣಿಕರಿಂದ ಹಲವಾರು ದೂರುಗಳನ್ನು ಸ್ವೀಕರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಫಲಹಾರ ಮಂದಿರಗಳ ಆಯ್ಕೆ ಮತ್ತು ನಿರ್ವಹಣೆಯನ್ನು ಉತ್ತಮಪಡಿಸಿಕೊಳ್ಳಲು ನಿರ್ದೇಶನಗಳನ್ನು ನೀಡಲಾಗಿದೆ ಎಂದು ತಿಳಿಸಿದೆ.ಅನುಸರಿಸಬೇಕಾದ ಕ್ರಮಗಳು: ಫಲಹಾರ ಮಂದಿರ ಗುರುತಿಸುವ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಪ್ರಮುಖ ಮಾರ್ಗಗಳಲ್ಲಿ, ಯಾವ ಸ್ಥಳಗಳಲ್ಲಿ ಫಲಹಾರ ಮಂದಿರಗಳ ಲಭ್ಯತೆ ಇದೆ ಎಂಬ ಬಗ್ಗೆ ಮಾರ್ಗ ಸಮೀಕ್ಷೆ ನಡೆಸುವುದು. ದೂರ ಸಂಚಾರದ ಅನುಸೂಚಿಗಳನ್ನು ಪಟ್ಟಿ ಮಾಡಿ ಅವುಗಳಿಗೆ ಯಾವ ಸ್ಥಳಗಳಲ್ಲಿ, ನೈಸರ್ಗಿಕ ಕರೆ ಮತ್ತು ಫಲಹಾರ/ ಉಪಹಾರಕ್ಕಾಗಿ ನಿಲುಗಡೆ ನೀಡಬೇಕೆಂಬುದರ ಬಗ್ಗೆ ನಿರ್ಧರಿಸುವುದು.
ಫಲಹಾರ ಮಂದಿರಗಳನ್ನು ನಿಗದಿಪಡಿಸುವಾಗ ಸದರಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುತ್ತಿರುವ ಅನುಸೂಚಿಗಳನ್ನು ಪರಿಗಣಿಸಿ ಆಯ್ಕೆ ಮಾಡಬೇಕು. ಈ ರೀತಿ ಆಯ್ಕೆ ಮಾಡಿದ ಫಲಹಾರ ಮಂದಿರವು ಮುಖ್ಯ ರಸ್ತೆಯಿಂದ ಸ್ವಲ್ಪ ಒಳಭಾಗದಲ್ಲಿದ್ದು, ಬಸ್ಸುಗಳ ನಿಲುಗಡೆಗೆ ಸಾಕಷ್ಟು ಸ್ಥಳಾವಕಾಶವಿರಬೇಕು.ರಸ್ತೆ ವಿಭಜಕಗಳಿರುವ ರಾಷ್ಟ್ರೀಯ/ ರಾಜ್ಯ ಹೆದ್ದಾರಿಗಳಲ್ಲಿ ರಸ್ತೆಯ ಎರಡು ಬದಿಗಳಲ್ಲಿ ಪ್ರತ್ಯೇಕ ಫಲಹಾರ ಮಂದಿರಗಳನ್ನು ಆಯ್ಕೆ ಮಾಡಬೇಕು. ಬಸ್ಸುಗಳನ್ನು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ರಸ್ತೆ ವಿಭಜಕ ದಾಟುವುದು ಅಥವಾ ‘ಯು’ ತಿರುವು ತೆಗೆದುಕೊಂಡು ಫಲಹಾರ ಮಂದಿರಕ್ಕೆ ಹೋಗುವಂತಿರಬಾರದು. ಫಲಹಾರ ಮಂದಿರವು ಕಡ್ಡಾಯವಾಗಿ ಎಡಬದಿಯಲ್ಲಿರಬೇಕು.ಎರಡು ಲೇನ್ಗಳ ರಸ್ತೆಗಳಲ್ಲಿ (ರಸ್ತೆ ವಿಭಜಕ ಇಲ್ಲದ ರಸ್ತೆಗಳು) ಫಲಹಾರ ಮಂದಿರಗಳು ರಸ್ತೆಯ ಎರಡು ಬದಿಯಲ್ಲಿ ಇರಬಹುದು. ಫಲಹಾರ ಮಂದಿರಗಳಲ್ಲಿ ಊಟೋಪಹಾರಗಳಿಗೆ ನಿಗದಿಪಡಿಸಿದ ದರಗಳನ್ನು ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಹಮತಿಸಿರಬೇಕು. ಕೇಂದ್ರ ಕಛೇರಿಗೆ ಪ್ರಸ್ತಾವನೆ ಕಳುಹಿಸುವ ಸಂದರ್ಭದಲ್ಲಿ ಪರಸ್ಪರ ಒಪ್ಪಿರುವ ದರಗಳ ಪಟ್ಟಿಯನ್ನು ಕಳುಹಿಸಬೇಕು.ಒಂದು ವೇಳೆ ಸಹಮತಿಸಿರುವ ದರಗಳಿಗಿಂತಲೂ ಹೆಚ್ಚಿಗೆ ದರಗಳನ್ನು ಪಡೆದಲ್ಲಿ ದಂಡವನ್ನು ವಿಧಿಸುವುದು ಮತ್ತು ಇಂತಹ ದೂರುಗಳನ್ನು ಗಂಭೀರವಾಗಿ ಪರಿಗಣಿಸುವುದು. ದೂರುಗಳು ಮರುಕಳಿಸಿದಲ್ಲಿ ಫಲಹಾರ ಮಂದಿರದ ಮಾಲೀಕರಿಗೆ ಸೂಚನಾ ಪತ್ರವನ್ನು ನೀಡಿ ಕರಾರು ರದ್ಧತಿಗೆ ಕ್ರಮ ಕೈಗೊಳ್ಳುವುದು.ಫಲಹಾರ ಮಂದಿರಗಳಲ್ಲಿ ಉತ್ತಮ ಊಟೋಪಹಾರಗಳನ್ನು ಸ್ಪರ್ಧಾತ್ಮಕ ದರಗಳಲ್ಲಿ ಒದಗಿಸಿದಾಗ, ಹೆಚ್ಚಿನ ಪ್ರಯಾಣಿಕರು ಊಟೋಪಹಾರವನ್ನು ಉಪಯೋಗಿಸುವ ಕುರಿತು ಫಲಹಾರ ಮಂದಿರದ ಮಾಲೀಕರಿಗೆ ತಿಳುವಳಿಕೆ ನೀಡುವುದು. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಮತ್ತು ಫಲಹಾರ ಮಂದಿರಗಳಿಗೆ ಉತ್ತಮ ವ್ಯಾಪಾರ ಆಗುತ್ತದೆ. ಕರಾರು ಒಪ್ಪಂದ ಮಾಡಿಕೊಳ್ಳುವ ಮುನ್ನ ಫಲಹಾರ ಮಂದಿರದ ಮಾಲೀಕತ್ವದ ಬಗ್ಗೆ ಧೃಡಪಡಿಸಿಕೊಂಡು ನಂತರ ಕರಾರು ಒಪ್ಪಂದ ಮಾಡಿಕೊಳ್ಳುವುದು ಮತ್ತು ಕರಾರು ಒಪ್ಪಂದದ ನಂತರ ಸದರಿ ಫಲಹಾರ ಮಂದಿರವು ನಿಗಮದಿಂದ ಮಾನ್ಯತೆ ಪಡೆದಿರುವ ಬಗ್ಗೆ ಕಡ್ಡಾಯವಾಗಿ ಫಲಕವನ್ನು ಆಯಕಟ್ಟಿನ ಸ್ಥಳದಲ್ಲಿ ಪ್ರದರ್ಶಿಸಬೇಕು.ಇರಬೇಕಾದ ಮೂಲಭೂತ ಸೌಕರ್ಯಗಳು
ಫಲಹಾರ ಮಂದಿರವು ಉತ್ತಮವಾದ ಕಟ್ಟಡವನ್ನು ಹೊಂದಿ ಪುರುಷರಿಗೆ/ ಮಹಿಳೆಯರಿಗೆ ಪ್ರತ್ಯೇಕವಾದ ಶೌಚಾಲಯ ಮತ್ತು ಮೂತ್ರಾಲಯಗಳನ್ನು ಹೊಂದಿರಬೇಕು.
ನಿಗಮದ ವಾಹನದ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಫಲಹಾರ ಮಂದಿರದ ಮಾಲೀಕರ ಕೋರಿಕೆಯ ಮೇರೆಗೆ ವಾಹನಗಳನ್ನು ಊಟೋಪಹಾರಕ್ಕಾಗಿ ನಿಲುಗಡೆ ನೀಡುತ್ತಿದ್ದು, ಸದರಿ ಫಲಹಾರ ಮಂದಿರಗಳ ಶೌಚಾಲಯಗಳು ಕಡ್ಡಾಯವಾಗಿ ಶುಚಿತ್ವದಿಂದ ಕೂಡಿರಬೇಕು. ಮತ್ತು ಶೌಚಾಲಯ/ ಮೂತ್ರಾಲಯ ಬಳಸುವ ಪ್ರಯಾಣಿಕರಿಂದ ಯಾವುದೇ ಶುಲ್ಕ ವಸೂಲು ಮಾಡಬಾರದು ಮತ್ತು ಈ ಸೌಲಭ್ಯ ಉಚಿತ ಎಂದು ಫಲಕ ಪ್ರದರ್ಶಿಸುವುದು.
ಫಲಹಾರ ಮಂದಿರವು ಕನಿಷ್ಠ 100 ಆಸನಗಳ ಸ್ಥಳಾವಕಾಶ ಹೊಂದಿರಬೇಕು. ಉತ್ತಮವಾದ ಬೆಳಕಿನ ವ್ಯವಸ್ಥೆಯನ್ನು ಹೊಂದಿರಬೇಕು.ಕಡಿಮೆ ಸಮಯದಲ್ಲಿ ಉತ್ತಮ ಗುಣಮಟ್ಟದ ಉಪಹಾರಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಸೌಲಭ್ಯ ಮತ್ತು ವ್ಯವಸ್ಥೆಯನ್ನು ಹೊಂದಿರಬೇಕು. ಫಲಹಾರ ಮಂದಿರದ ಆವರಣವು ಶುಚಿತ್ವದಿಂದ ಕೂಡಿರಬೇಕು ಮತ್ತು ನೊಣ/ ಕೀಟಗಳು ಇರಬಾರದು.
ಫಲಹಾರ ಮಂದಿರದ ಮಾಲೀಕರು ಬಸ್ಸಿನಲ್ಲಿರುವ ಪ್ರಯಾಣಿಕರ ವಸ್ತುಗಳನ್ನು ನೋಡಿಕೊಳ್ಳಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿರಬೇಕು. ಫಲಹಾರ ಮಂದಿರಗಳಲ್ಲಿ ನಿಲುಗಡೆಯಾಗುವ ವಾಹನ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಹೋಟೆಲ್ನ ಒಳ ಹಾಗೂ ಹೊರ ಆವರಣದಲ್ಲಿ ಅಳವಡಿಸುವುದು ಕಡ್ಡಾಯವಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರ ಹಿತ ದೃಷ್ಟಿ ಕಾಯದ ಅಧಿಕಾರಿಗಳು. ಕಳಪೆ ಗುಣಮಟ್ಟದ ಆಹಾರಗಳನ್ನು ನೀಡುವ ಹೋಟೆಲ್ಗಳಿಗೆ ಪರವಾನಿಗೆ ನೀಡಿ .ಪ್ರತಿಯೊಂದು ಬಸ್ ಸ್ಟ್ಯಾಂಡ್ ಗಳಲ್ಲಿ ಆಗಲಿ ಅಥವಾ ಹೋಟೆಲ್ಗಳಲ್ಲಿ ಆಗಲಿ ಎಂಆರ್ಪಿ ಗಿಂತ ಹೆಚ್ಚು ಹಣ ಪಡೆಯುತ್ತಿರುವುದು ಗೊತ್ತಿದ್ದರೂ ಕೂಡ ಕಣ್ಮುಚ್ಚಿ ಕುಳಿತ ಅಧಿಕಾರಿಗಳು.