ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗೆಯಿಂದಲೇ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಸರ್ಕಾರಿ ಅಧಿಕಾರಿಗಳ ಬೇಟೆ ಕೈಗೊಂಡಿದ್ದಾರೆ. ಇಂದು ಬೆಳಗ್ಗಿನಿಂದಲೇ ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಕಲಬುರಗಿ, ಮೈಸೂರು, ದಾವಣಗೆರೆ, ಚಿತ್ರದುರ್ಗ, ಧಾರವಾಡ, ಬೆಳಗಾವಿ ಸೇರಿ 9 ಜಿಲ್ಲೆಗಳಲ್ಲಿ 11 ಅಧಿಕಾರಿಗಳಿಗೆ ಸಂಬಂಧಿಸಿದ 56 ಸ್ಥಳಗಳಲ್ಲಿ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮೆಗಾ ದಾಳಿಯಲ್ಲಿ 100ಕ್ಕೂ ಹೆಚ್ಚು ಅಧಿಕಾರಿಗಳು ಭಾಗವಹಿಸಿದ್ದಾರೆ.
ಧಾರವಾಡ: ಬೆಳಗಾವಿ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಶೇಖರಗೌಡ ಮನೆ ಮೇಲೆ ದಾಳಿ ನಡೆದಿದೆ. ಇವರು ಧಾರವಾಡದಲ್ಲಿ ಎರಡು ಕಡೆ ಪಿಜಿಗಳನ್ನು ಹೊಂದಿದ್ದಾರೆ. ಕೆಸಿಡಿ ರಸ್ತೆಯ ಸಪ್ತಾಪುರ ಹಾಗೂ ರಾಧಾಕೃಷ್ಣ ನಗರದಲ್ಲಿ ಈ ಪಿಜಿಗಳಿದ್ದು, ಎರಡೂ ಸ್ಥಳಗಳಲ್ಲೂ ಏಕಕಾಲಕ್ಕೆ ದಾಳಿ ನಡೆದಿದೆ.
ರಾಮನಗರ: ಜಿಲ್ಲೆಯ ಆರೋಹಳ್ಳಿ ತಹಶೀಲ್ದಾರ್ ವಿಜಿಯಣ್ಣ ಅವರಿಗೆ ಸಂಬಂಧಿಸಿದ ಆರು ಸ್ಥಳಗಳಲ್ಲಿ ದಾಳಿ ನಡೆದಿದೆ. ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗು ತುಮಕೂರಿನ ತಲಾ ಎರಡು ಸ್ಥಳಗಳು, ರಾಮನಗರದ ಆರೋಹಳ್ಳಿ ಹಾಗೂ ಮಂಡ್ಯದ ಒಂದೆಡೆ ದಾಳಿ ನಡೆಸಲಾಗಿದೆ. ವಿಜಿಯಣ್ಣ ಈ ಮೊದಲು ಕೋಲಾರ ತಹಶೀಲ್ದಾರ್ ಆಗಿದ್ದರು.
ಕೋಲಾರ ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.ಕಲಬುರಗಿ: ಬಿಬಿಎಂಪಿ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಬಸವರಾಜ್ ಮಾಗಿ ಅವರ ಬೆಂಗಳೂರು ಹಾಗು ಕಲಬುರಗಿಯ ಎಂ.ಬಿ.ನಗರದಲ್ಲಿರುವ ನಿವಾಸದ ಮೇಲೂ ದಾಳಿ ನಡೆದಿದೆ.ಬೆಳಗಾವಿ: ಜಿಲ್ಲಾ ಪಂಚಾಯತಿ ಎಇಇ ದುರದುಂಡೇಶ್ವರ ಬನ್ನೂರ ಅವರಿಗೆ ಸೇರಿದ ಸೇರಿದ ನಾಲ್ಕು ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಗೋಕಾಕ, ಹೊನಗಾ, ಹಿಂಡಲಗಾ ಹಾಗೂ ಯಳ್ಳೂರ ಸೇರಿ 4 ಕಡೆ ದಾಳಿ ನಡೆದಿದೆ.
ಗೋಕಾಕದ ನಿವಾಸ, ಹೊನಗಾ ಫಾರ್ಮ್ ಹೌಸ್, ಯಳ್ಳೂರು ಮನೆ ಹಿಂಡಲಗಾ ಅಪಾರ್ಟ್ಮೆಂಟ್ಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ನಾಲ್ಕು ತಿಂಗಳ ಹಿಂದಷ್ಟೇ ಲೋಕಾಯುಕ್ತ ಅಧಿಕಾರಿಗಳು ಮಹಾದೇವ ಬನ್ನೂರ ಮೇಲೆ ದಾಳಿ ಮಾಡಿದ್ದರು. ಗುತ್ತಿಗೆದಾರರಿಂದ ಹಣಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದಿದ್ದರು.
ಮಂಡ್ಯ: ನಗರದ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಶಿವರಾಜು ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಎಸ್ಪಿ ಸುರೇಶ್ ಬಾಬು ನೇತೃತ್ವದ ತಂಡ ನಗರ ಸೇರಿದಂತೆ ಜಿಲ್ಲೆಯ ನಾಗಮಂಗಲ ತಾಲೂಕಿನ ಇಜ್ಜಲಘಟ್ಟ ಗ್ರಾಮದ ಮನೆ, ಫಾರ್ಮ್ಹೌಸ್, ಕ್ರಷರ್ ಹಾಗೂ ಮೈಸೂರಿನ ಶಿವರಾಜು ಅಳಿಯನ ಮನೆ ಸೇರಿದಂತೆ ವಿವಿಧೆಡೆ ಪರಿಶೀಲನೆ ನಡೆಸುತ್ತಿದೆ.
ಮೈಸೂರು: ನಗರದ ನಜರ್ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಸಿ.ಬಡಾವಣೆಯಲ್ಲಿ ನೀರಾವರಿ ಇಲಾಖೆಯ ಇಂಜಿನಿಯರ್ ಕೆ.ಮಹೇಶ್ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಮಹೇಶ್ ಕಾರ್ಯ ನಿರ್ವಹಿಸುವ ಗೋಕುಲಂನಲ್ಲಿರುವ ಕಾವೇರಿ ನೀರಾವರಿ ನಿಗಮದ ಕಚೇರಿ ಮೇಲೆ ದಾಳಿ ಮಾಡಿ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ದಾವಣಗೆರೆ: ನಗರದಲ್ಲಿ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಇಂಜಿನಿಯರ್ ಡಿ.ಹೆಚ್.ಉಮೇಶ್ ಹಾಗೂ ಎಇಇ ಬೆಸ್ಕಾಂ ಜಾಗೃತದಳ ಇಂಜಿನಿಯರ್ ಎಂ.ಎಸ್.ಪ್ರಭಾಕರ್ ಮನೆ ಹಾಗೂ ಕಚೇರಿಗಳು ಸೇರಿ ಒಟ್ಟು 6 ಕಡೆಗಳಲ್ಲಿ ಲೋಕಾ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಡಿ.ಹೆಚ್.ಉಮೇಶ್ ಅವರ ದಾವಣಗೆರೆ ನಗರದ ಶಿವಕುಮಾರ ಸ್ವಾಮಿ ಬಡಾವಣೆಯ ಎರಡನೇ ಹಂತದಲ್ಲಿರುವ ಮನೆ ಹಾಗೂ ಹಾಲಿ ಸೇವೆಯಲ್ಲಿ ಇರುವ ಚಿಕ್ಕಮಗಳೂರಿನಲ್ಲೂ ದಾಳಿ ನಡೆಸಲಾಗಿದೆ.
ಇದಲ್ಲದೇ ದಾವಣಗೆರೆ ನಗರದ ಕರೂರ ಕೈಗಾರಿಕೆ ಪ್ರದೇಶದಲ್ಲಿ ಶೆಡ್, ಆವರಗೆರೆಯಲ್ಲಿ ಈಜುಕೊಳವಿರುವ ಮನೆ ಮೇಲೂ ದಾಳಿ ನಡೆದಿದೆ.
ಉಮೇಶ್ ಸೇವೆ ಸಲ್ಲಿಸುತ್ತಿರುವ ಚಿಕ್ಕಮಗಳೂರಿನ ಟಿಎಲ್ ಹಾಗೂ ಎಸ್ಎಸ್ ವಿಭಾಗ (ಕೆಪಿಟಿಸಿಎಲ್) ಮೇಲೆ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಚಿತ್ರದುರ್ಗ ಹೊಸದುರ್ಗ ಭಾಗದಲ್ಲೂ ದಾಳಿ ನಡೆದಿದೆ. ದಾವಣಗೆರೆ ಜಿಲ್ಲೆಯ ಮೂರು ಕಡೆ ಮತ್ತು ಡಿ.ಹೆಚ್.ಉಮೇಶ್ ಅವರಿಗೆ ಸೇರಿದಂತೆ ಆರು ಕಡೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.
ದಾವಣಗೆರೆ ಬೆಸ್ಕಾಂ ವಿಜಿಲೆನ್ಸ್ ಅಧಿಕಾರಿ ಎಇಇ ಪ್ರಭಾಕರ್ ಅವರಿಗೂ ಶಾಕ್ ನೀಡಿದ ಲೋಕಾಯುಕ್ತ ಅಧಿಕಾರಿಗಳು ಸಾಕಷ್ಟು ಕಡೆ ದಾಳಿ ನಡೆಸಿದ್ದಾರೆ. ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್ 13ನೇ ಮೇನ್ನಲ್ಲಿರುವ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪೂರೆ ನೇತೃತ್ವದಲ್ಲಿ ಚಿತ್ರದುರ್ಗ, ಹಾವೇರಿ, ಬಳ್ಳಾರಿ ವಿಭಾಗದ ಲೋಕಾಯುಕ್ತ ಅಧಿಕಾರಿಗಳ ಒಟ್ಟು ಆರು ತಂಡಗಳಿಂದ ಏಕಕಾಲಕ್ಕೆ ದಾಳಿ ನಡೆದಿದೆ.
ದಾಳಿಗೊಳಗಾದ ಅಧಿಕಾರಿಗಳ ವಿವರ.
ಬಸವರಾಜ್ ಮಾಗಿ – ಕೆಂಗೇರಿ ಬಿಬಿಎಂಪಿ ರೆವಿನ್ಯೂ ಆಫೀಸರ್, ನಿವೃತ್ತ ಕಾರ್ಯಪಾಲಕ ಅಭಿಯಂತರ.
ಶಿವರಾಜ್ ಎಸ್ – ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗ, ಮಂಡ್ಯ
ಶೇಖರ್ ಗೌಡ – ಪ್ರಾಜೆಕ್ಟ್ ಮ್ಯಾನೇಜರ್, ಧಾರವಾಡ.
ದುರದುಂಡೇಶ್ವರ ಬನ್ನೂರ – ಅಸಿಸ್ಟೆಂಟ್ ಇಂಜಿನಿಯರ್, ಬೆಳಗಾವಿ.
ಡಿ.ಹೆಚ್.ಉಮೇಶ್ – ಎಕ್ಸಿಕ್ಯೂಟಿವ್ ಇಂಜಿನಿಯರ್, ದಾವಣಗೆರೆ.
ಎಂ.ಎಸ್.ಪ್ರಭಾಕರ್ – ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್, ದಾವಣಗೆರೆ.
ವಿಜಿಯಣ್ಣ – ಆರೋಹಳ್ಳಿ ತಹಶೀಲ್ದಾರ್.
ಮಹೇಶ್ ಕೆ – ಸೂಪರಿಂಟೆಂಡೆಂಟ್ ಇಂಜಿನಿಯರ್.
ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಗೆ ಆರೋಪ . ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂ ಬೆಳಗ್ಗೆ ಶಾಕ್ ನೀಡಿದ ಲೋಕಾಯುಕ್ತ ದಾಳಿ.